ಹೊಸಪೇಟೆ: ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದ ತುಂಗಭದ್ರಾ ಡ್ಯಾಂ ಭಾನುವಾರ ಭರ್ತಿಯಾಗಿದೆ. ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಿರುವ ಕಾರಣ ಜಲಾಶಯದ 20 ಕ್ರಸ್ಟ್‌ಗೇಟ್‌ಗಳನ್ನು ತೆರೆದು 46200 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ ಜಲಾಶಯದ ಕ್ರಸ್ಟ್‌ಗೇಟ್ ಗೆ ಪೂಜೆ ಸಲ್ಲಿಸಿ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನ ಸುರಿದ ಅಧಿಕ ಮಳೆಯಿಂದ ಜಲಾಶಯದ ಒಳ ಹರಿವು ಗಣನೀಯವಾಗಿ ಏರುತ್ತಿದೆ.
ಶನಿವಾರವೇ ಜಲಾಶಯದ ಒಳ ಹರಿವು 1.20 ಲಕ್ಷ ಕ್ಯೂಸೆಕ್ ದಾಟಿತ್ತು. ಡ್ಯಾಂನಿಂದ ನದಿಗೆ ಹೆಚ್ಚುವರಿ ನೀರು ಹರಿಸುವ ಸೂಚನೆ ನೀಡಿದ್ದ ತುಂಗಭದ್ರಾ ಮಂಡಳಿ ಮುಂಜಾಗ್ರತಾ ಕ್ರಮವಾಗಿ ನದಿಪಾತ್ರದ ಜನ-ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಚ್ಚರಿಕೆ ನೀಡಿತ್ತು. ಸದ್ಯ ಜಲಾಶಯಕ್ಕೆ 1.73 ಲಕ್ಷ ಕ್ಯೂಸೆಕ್ ಹರಿದು ಬರುತ್ತಿದ್ದು, 103 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಪ್ರಸ್ತುತ 83.277 ಟಿಎಂಸಿ ನೀರು ಸಂಗ್ರಹವಿದೆ.
ಗರಿಷ್ಠ ಮಟ್ಟ 1633 ಅಡಿಗಳು ಇದ್ದು, ಇಂದಿನ ಮಟ್ಟ 1628.15 ಅಡಿ. ಪ್ರವಾಸಿಗರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ಬೋಟ್ ಸಂಚಾರ ನಿಷೇಧಿಸಲಾಗಿದೆ. ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಬಳಿ ಇರುವ ಸ್ನಾನಘಟ್ಟ, ಪುರಂದರ ಮಂಟಪ ಹಾಗೂ ಚಕ್ರತೀರ್ಥ ಕೋದಂಡರಾಮ ಸ್ವಾಮಿ ದೇವಾಲಯದ ನದಿ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.