ಹೊಸಪೇಟೆ: ತುಂಗಭದ್ರಾ ಜಲಾಶಯ ವೀಕ್ಷಣೆಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಒಳಹರಿವು ಏರಿಕೆಯಾಗುತ್ತಿದಂತೇ ಜಲಾಶಯ ಮೈದುಂಬಿಕೊಂಡಿದ್ದು, ಮನ ಮೋಹಕ ದೃಶ್ಯ ಸವಿಯಲು ಪ್ರವಾಸಿಗರು, ಟಿ.ಬಿ ಡ್ಯಾಂ ಕಡೆ ಮುಖ ಮಾಡಿದ್ದಾರೆ.
ಹಂಪಿ ಹಾಗೂ ಕಮಲಾಪುರದ ಜೂಲಾಜಿಕಲ್ ಪಾರ್ಕ್‌ಗೆ ಆಗಮಿಸುವ ಪ್ರವಾಸಿಗರು ಡ್ಯಾಂ ವೀಕ್ಷಿಸಿಯೇ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಹಿನ್ನೀರು ಪ್ರದೇಶದ ಸಸ್ಯೋದ್ಯಾನ ಬಳಿ ಪ್ರವಾಸಿಗರು ಸೆಲ್ಫಿ ಗೆ ಮುಗಿಬೀಳುತ್ತಿದ್ದಾರೆ. ಏರಿದ ಒಳ ಹರಿವು: ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಿದೆ. ಡ್ಯಾಂನ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜು.22 ಕ್ಕೆ ಜಲಾಶಯದಲ್ಲಿ 1621.44 ಅಡಿ ನೀರು ಸಂಗ್ರಹವಾಗಿದ್ದು, 59.011 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ. 62.220 ಕ್ಯೂಸೆಕ್ ಒಳ ಹರಿವು ಇದ್ದು, 3472 ಕ್ಯೂಸೆಕ್‌ನಷ್ಟು ಹೊರ ಹರಿವು ಇದೆ.
ಕಳೆದ ವರ್ಷ ಇದೇ ದಿನ 35138 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಈ ಬಾರಿ ಹೆಚ್ಚು ನೀರಿದ್ದು, ಒಳ ಹರಿವು ಕೂಡ ಏರುಗತಿಯಲ್ಲಿ ಇರುವುದರಿಂದ ಜಲಾಶಯ ನೆಚ್ಚಿರುವ ರೈತರು ಖುಷಿಯಾಗಿದ್ದಾರೆ. ಇನ್ನೊಂದೆಡೆಯಲ್ಲಿ ಪ್ರವಾಸಿಗರು ಕೂಡ ಜಲಾಶಯದ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಡ್ಯಾಂನಲ್ಲಿ ಪ್ರವಾಸಿ ಲೋಕ ಸೃಷ್ಟಿಯಾಗುತ್ತಿದೆ. ಗಂಗೆ ಪೂಜೆ: ತುಂಗಭದ್ರಾ ಜಲಾಶಯ ಭರ್ತಿಯಾಗುತ್ತಿದೆ.
ಏತನ್ಮಧ್ಯೆ ಕಾಲುವೆಗಳಿಗೂ ನೀರು ಹರಿಸಿರುವುದರಿಂದ ಜಲಾಶಯ ನೆಚ್ಚಿರುವ ಗಂಗಾವತಿ, ಕಂಪ್ಲಿ, ಸಿರುಗುಪ್ಪ, ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ಕಮಲಾಪುರ ಮತ್ತು ಹೊಸಪೇಟೆ ಭಾಗದ ರೈತರು ಆಗಮಿಸಿ ಗಂಗೆಪೂಜೆ ಮಾಡುತ್ತಿದ್ದಾರೆ. ಗಂಗಾಮಾತೆಗೆ ಪೂಜೆ ಸಲ್ಲಿಸಿದ ಬಳಿಕ ಹೊಲ-ಗದ್ದೆಗಳಲ್ಲಿ ಭತ್ತ ನಾಟಿ ಸೇರಿದಂತೆ ಇತರೆ ಬೆಳೆಗಳ ಬಿತ್ತನೆಗೆ ಮುಂದಾಗುತ್ತಿದ್ದಾರೆ. ಹೀಗಾಗಿ ಜಲಾಶಯಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ಬಹುತೇಕರು ರೈತರು ಕೂಡ ಸೇರಿದ್ದಾರೆ.
ತುಂಗಭದ್ರಾ ಜಲಾಶಯ ಕಲ್ಯಾಣ ಕರ್ನಾಟಕದ ರಾಯಚೂರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ರೈತರ ಜಮೀನುಗಳಿಗೆ ನೀರು ಒದಗಿಸುತ್ತದೆ. ಈ ನಾಲ್ಕು ಜಿಲ್ಲೆಗಳ 3.5 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ ಜಲಾಶಯವನ್ನೇ ಆಶ್ರಯಿಸಿದೆ. ಈ ಮಧ್ಯೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಕೂಡ ಜಲಾಶಯದ ನೀರು ಪಡೆಯುತ್ತವೆ. ಹೀಗಾಗಿ ಈ ಜಲಾಶಯ ಕೃಷಿ ಪ್ರಧಾನ ಡ್ಯಾಂ ಆಗಿದೆ. ರೈತರ ಬದುಕಿಗೆ ಜಲಾಶಯವೇ ಆಧಾರವಾಗಿದೆ.