ಕೆ. ನಾಗರಾಜ್
ಕೂಡ್ಲಿಗಿ: ರೈತರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಿರಿಧಾನ್ಯಗಳನ್ನು ಬೆಳೆಯುವಂತೆ ಉತ್ತೇಜಿಸಲು ರೈತ ಸಿರಿ ಯೋಜನೆಯನ್ನು ಕೃಷಿ ಇಲಾಖೆ ಅನುಷ್ಠಾನಗೊಳಿಸಿದ್ದು ಅರ್ಹ ರೈತರಿಗೆ ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿದೆ. ತಾಲೂಕಿನ ಆಸಕ್ತ ರೈತರು ಬೆಳೆದ ಸಿರಿ ಧಾನ್ಯಗಳಾದ ಸಜ್ಜೆ ಜೋಳ, ರಾಗಿ, ಊದಲು, ನವಣೆ, ಅರ್ಕ, ಕೊರಲೆ, ಸಾಮೆಗಳ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆ ವೃದ್ಧಿಸುವುದು, ಸಿರಿಧಾನ್ಯಗಳ ಸಂಸ್ಕಾರಣಾ ಘಟಕಗಳ ಸ್ಥಾಪನೆ ಪ್ರೋತ್ಸಾಹಧನ ನೀಡುವುದು ಮಾರುಕಟ್ಟೆ ಸಾಮಥ್ಯಾಭಿವೃದ್ಧಿ ಇತರೆ ವಿಷಯಗಳ ಕುರಿತು ರೈತರಲ್ಲಿ ಅರಿವು ಮೂಡಿಸಲು ಕೂಡ್ಲಿಗಿ ಕೃಷಿ ಇಲಾಖೆ ಸಜ್ಜಾಗಿದೆ.
ಉದ್ದೇಶ: ಸಿರಿಧಾನ್ಯಗಳೆಂದು ಕರೆಯುವ ಕಿರುಧಾನ್ಯಗಳಿಗೆ ಕಡಿಮೆ ನೀರು ಸಾಕು, ಕಡಿಮೆ ಒಳಸುರಿ ಸಾಕು. ಅಷ್ಟರಲ್ಲೇ ಅವು ಹೆಚ್ಚಿನ ಪೌಷ್ಟಿಕಾಂಶ ನೀಡುತ್ತವೆ. ಕೊರೊನಾ ಸಂದರ್ಭದಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಧಾನ್ಯಗಳು ಸಹಕಾರಿಯಾಗಲಿವೆ. ಇತ್ತೀಚಿನ ದಿನಗಳಲ್ಲಿ ಬಯಲು ಸೀಮೆಯಲ್ಲಿ ಕಡಿಮೆ ಮಳೆ ಬೀಳುವುದರಿಂದ ಸಿರಿಧಾನ್ಯಗಳನ್ನು ಬೆಳೆಯಲು ಅನುಕೂಲ ಎಂದು ಕಂಡುಕೊಳ್ಳಲಾಗಿದೆ. ಸಿರಿಧಾನ್ಯಗಳ ಮಾರುಕಟ್ಟೆ ಸಂಪರ್ಕ ಹೆಚ್ಚಿಸಿ ಇವುಗಳನ್ನು ಬೆಳೆಯುವ ಕೃಷಿಕರನ್ನು ಮುಖ್ಯವಾಹಿನಿಗೆ ತರುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಅರ್ಹತೆ: ರೈತರು ಅವರ ದಾಖಲೆಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಕಾನೂನು ರೀತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಹಿಂದುಳಿದ ರೈತರಿಗೆ ಆದ್ಯತೆ ನೀಡಲಾಗುತ್ತದೆ. ಕೃಷಿ ಇಲಾಖೆಯಿಂದ ಅವರು ನೀಡಿರುವ ಗುರಿ ಅನ್ವಯ ತಾಲೂಕು ಹೋಬಳಿವಾರು ನಿಗದಿಪಡಿಸಿರುವ ಗುರಿಯಂತೆ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರನ್ನು ಮೊದಲು ನೋಂದಾಯಿಸಿಕೊಂಡ ನಂತರ ಬೆಳೆ ಬಂದಾಗ ಕೃಷಿ ಅಧಿ ಕಾರಿಗಳು ಬೆಳೆಗಾರರ ಹೊಲಗಳಿಗೆ ತೆರಳಿ ಜಿಪಿಎಸ್ ಮಾಡಿ ನಂತರ ಜಮೀನು ವಿಸ್ತರಣೆ ಹೊಂದಾಣಿಕೆ ಆಗುವುದನ್ನು ಖಾತರಿ ಮಾಡಿಕೊಂಡು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿ ಕಾರಿಗಳನ್ನು ಸಂಪರ್ಕಸಬಹುದಾಗಿದೆ.
ಸಿರಿಧಾನ್ಯ ಯೋಜನೆ: ಈ ಹೊಸ ಯೋಜನೆಗೆ ಹಲವು ಮುಖ. ಪಟ್ಟಣ ವಾಸಿಗಳಲ್ಲಿ ಕಿರುಧಾನ್ಯಗಳ ಸೇವನೆಯಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ಅರಿವು ಮೂಡಿಸುವುದು, ಕಿರುಧಾನ್ಯಗಳನ್ನು ಬೆಳೆಯುವುದು ಲಾಭಕರ ಎಂಬ ಭಾವ ರೈತರಲ್ಲಿ ಮೂಡಿಸುವುದು ಆಗಿದೆ. ಇತರ ಬೆಳೆಗಳಿಗಿಂತ ಶೇ. 70ರಷ್ಟು ಕಡಿಮೆ ನೀರು ಸಾಕು. ಕ್ರಿಮಿನಾಶಕಗಳ ಅಗತ್ಯವಿಲ್ಲ, ಕಡಿಮೆ ರಸಗೊಬ್ಬರ ಸಾಕು. ಪ್ರೊಟೀನ್, ನಾರಿನಂಶ, ಬಿ ಕಾಂಪ್ಲೆಕ್ಸ್, ಅಮೈನೋ ಆಮ್ಲಗಳು, ಫೋಲಿಕ್ ಆಮ್ಲ, ವಿಟಮಿನ್ ಇ, ಕಬ್ಬಿಣ, ಮ್ಯಾಗ್ನಿಸಿಯಂ, ತಾಮ್ರ, ಫಾಸ್ಪ ರಸ್, ಸತು, ಪೊಟ್ಯಾಷಿಯಂ, ಕ್ಯಾಲ್ಸಿಯಂಗಳ ಆಗರ, ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ. ಹೃದಯದ ಕಾಯಿಲೆಗಳು ಮತ್ತು ಮಧುಮೇಹದ ಆತಂಕವನ್ನು ಕಡಿಮೆ ಮಾಡುತ್ತದೆ.