ಸಂಡೂರು: ಸಿದ್ದರಾಮಯ್ಯನವರು ಆಂತರಿಕ ಜಗಳದಿಂದ ಹೆಣಗಳ ಲೆಕ್ಕ ಕೇಳುವಂಥ ಸ್ಥಿತಿಗೆ ತಲುಪಿದ್ದಾರೆ. ಆದರೆ ವಿಧಾನಸಭೆಯಲ್ಲಿ ಚರ್ಚೆಗೆ ಯಾವುದೇ ದಾಖಲಾತಿ ತರದೇ, ಚರ್ಚಿಸದೇ ಪತ್ರಿಕಾ ಹೇಳಿಕೆ ಮೂಲಕ ಅರೋಪಿಸುವುದು ಎಷ್ಟು ಸರಿ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಅಶ್ವಥನಾರಾಯಣಗೌಡ ಪ್ರಶ್ನಿಸಿದರು.
ಅವರು ಶನಿವಾರ ಪಟ್ಟಣದ ಯಶವಂತವಿಹಾರ ಮೈದಾನದಲ್ಲಿ ನಡೆದ ಬಳ್ಳಾರಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಕೋವಿಡ್ ಸವಾಲುಗಳನ್ನು ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ಅತಿ ಉತ್ತಮವಾಗಿ ನಿರ್ವಹಿಸಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಸಾಕ್ಷಿಗಳೂ ನಮ್ಮಲ್ಲಿವೆ. ಆದರೆ ಸಿದ್ದರಾಮಯ್ಯನವರು ಸಭೆಯಲ್ಲಿ ಚರ್ಚಿಸದೇ ಪತ್ರಿಕೆಗಳ ಮೂಲಕ ವೆಂಟಿಲೇಟ್‌ರನಲ್ಲಿ ಸಾವಿರಾರು ಕೋಟಿ ಲಪಟಾಯಿಸಿದ್ದಾರೆ, ವ್ಯಾಕ್ಸಿನ್ ತಂದಿಲ್ಲ. ಸತ್ತವರ ಸುಳ್ಳು ಲೆಕ್ಕ ಹೇಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಇದು ಸತ್ಯಕ್ಕೆ ದೂರವಾದ ವಿಚಾರ ಎಂದರು. ಮುಂದಿನ ದಿನಗಳಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ಮಾಡುವ ಮೂಲಕ 42 ಸಾವಿರ ಗ್ರಾಮ ಪಂಚಾಯಿತಿ ಪ್ರತಿನಿಧಿಗಳನ್ನು ಬಿಜೆಪಿಯಿಂದ ಆಯ್ಕೆಯಾಗುವಂತೆ 23 ಸಾವಿರ ಪಂಚಾಯಿತಿಗಳಲ್ಲಿ ಶ್ರಮಿಸಬೇಕು. ಮುಂಬರುವ ಜಿಪಂ-ತಾಪಂ ಚುನಾವಣೆಯಲ್ಲಿ ಅತಿ ಹೆಚ್ಚು ಸದಸ್ಯರನ್ನು ಗೆಲ್ಲಿಸಬೇಕಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕಿದೆ ಎಂದರು.
ಸಂಸದ ವೈ. ದೇವೇಂದ್ರಪ್ಪ ಮಾತನಾಡಿ, ನಾಡಿನ ರೈತರಿಗೆ ರಸಗೊಬ್ಬರಕ್ಕಾಗಿಯೇ ಪ್ರತಿ ಚೀಲಕ್ಕೆ 700 ರೂಪಾಯಿ ರಿಯಾಯಿತಿಯನ್ನು ಕೊಡಿಸಲು ರಾಜ್ಯದ ಎಲ್ಲ ಸಂಸದರ ಒಕ್ಕೊರಲ ಬೇಡಿಕೆಗೆ ಪ್ರಧಾನಿ ಸ್ಪಂದಿಸಿ 14476 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ರೈತರ ರಕ್ಷಣೆಗೆ ನಿಂತಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ 4 ಜನ ಸಂಸದರಿಗೆ ಮಂತ್ರಿಪದವಿ ನೀಡಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಪ್ರಧಾನಿಯ ಯೋಜನೆಗಳನ್ನು ಜನತೆಗೆ ತಲುಪಿಸಿ ಎಂದು ಕರೆ ನೀಡಿದರು.
ಬಿಜೆಪಿ ರಾಜ್ಯ, ಜಿಲ್ಲಾ ತಾಲೂಕು ಅಧ್ಯಕ್ಷರುಗಳು, ಪದಾಧಿ ಕಾರಿಗಳು ಇದ್ದರು. ತಾಲೂಕು ಅಧ್ಯಕ್ಷ ಜಿ.ಟಿ. ಪಂಪಾಪತಿ ಸ್ವಾಗತಿಸಿದರು. ಪುರುಷೋತ್ತಮ ಪ್ರಾರ್ಥಿಸಿದರು. ಓಬಳೇಶ್, ವೀರೇಶ್ ಇತರರು ಉಪಸ್ಥಿತರಿದ್ದರು.