ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಮಾಳಾಪುರ ಗ್ರಾಮದಲ್ಲಿ 47 ಎಕರೆ ಜಮೀನು ಖರೀದಿಯಲ್ಲಿ ಕಾನೂನು ಲೋಪವೆಸಗಿದ್ದೇವೆ ಎಂದು ಸಾಬೀತಾದಲ್ಲಿ ಕಾನೂನಿನಡಿ ಮುಂದಿನ ಕ್ರಮಕ್ಕೆ ನಾವು ಸಿದ್ಧರಿದ್ದೇವೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಸಂತೋಷ್ ಎಸ್. ಲಾಡ್ ಸ್ಪಷ್ಟಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಂಡೂರು ತಾಲೂಕು ತೋರಣಗಲ್ಲು ಹೋಬಳಿಯ ಮಾಳಾಪುರ ಗ್ರಾಮದ ಸರ್ವೇ ನಂ. 123, 47.63 ಎಕರೆ ಜಮೀನು 1981ರಿಂದ 1996ರ ವರೆಗೆ ಮೂಲ ಪಟ್ಟಾದಾರರಾದ ಮಕಾಶಿ ಹನುಮಗಾರಿ ಹೊನ್ನೂರಪ್ಪ ತಂದೆ ಹನುಮಂತಪ್ಪ ಎನ್ನುವವರ ಹೆಸರಿನಲ್ಲಿತ್ತು. ಪಹಣಿಯಲ್ಲೂ ಅವರ ಹೆಸರು ನಮೂದಾಗಿತ್ತು. ಬಳಿಕ 1996ರಲ್ಲಿ ಈ ಜಮೀನನ್ನು ಪಟ್ಟಾದಾರರಾದ ಮಕಾಶಿ ಹನುಮಗಾರಿ ಹೊನ್ನೂರಪ್ಪ ತಂದೆ ಹನುಮಂತಪ್ಪ ಅವರಿಂದ ನಾವು ಖರೀದಿಸಿದ್ದೇವೆ. ಇದೀಗ ಈ ಜಮೀನು ರೂಪಾ ಯು.ಲಾಡ್, ಸಂತೋಷ್ ಎಸ್.ಲಾಡ್, ವಿಜಯ ಲಾಡ್, ಅಕ್ಷಯ್‌ಲಾಡ್ ಮತ್ತು ನವೀನ್ ಲಾಡ್ ಅವರ ಹೆಸರಿನಲ್ಲಿದೆ. ಜಮೀನನ್ನು ಕಾನೂನಿನಡಿಯಲ್ಲೇ ಖರೀದಿಸಿದ್ದು, ಯಾವುದೇ ಲೋಪವೆಸಗಿಲ್ಲ ಎಂದವರು ಖಚಿತಪಡಿಸಿದ್ದಾರೆ.
ಜಮೀನನ್ನು 1996ರಲ್ಲಿ ಖರೀದಿಸಿದ ಬಳಿಕ ಅಲ್ಲಿಂದ ಇಲ್ಲಿವರೆಗೆ ಪ್ರತಿವರ್ಷ ತೆರಿಗೆಯನ್ನೂ ಪಾವತಿಸುತ್ತಿದ್ದೇವೆ ಎಂದ ಅವರು, ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಆದ್ಯತೆ ಮೆರೆಗೆ ಮಾಡುತ್ತಿದ್ದೇವೆ. ಕೊಳವೆಬಾವಿಯನ್ನೂ ಕೊರೆಸಿದ್ದೇವೆ. 2000ನೇ ಸಾಲಿನಲ್ಲಿ ಗಣಕೀಕೃತ ಪಹಣಿಯಲ್ಲೂ ನಮ್ಮ ಕುಟುಂಬದ ಎಲ್ಲ ಸದಸ್ಯರ ಹೆಸರುಗಳು ಮುಂದುವರೆದಿವೆ. ಆದರೆ, ಕಳೆದ 2012-2013ನೇ ಸಾಲಿನಲ್ಲಿ ಹುಬ್ಬಳ್ಳಿ ನಿವಾಸಿ ಹೊನ್ನೂರಪ್ಪ ಎನ್ನುವವರು ಸಂಡೂರು ನ್ಯಾಯಾಲಯದಲ್ಲಿ ನಮ್ಮ ಮೇಲೆ ಪ್ರಕರಣವನ್ನು ದಾಖಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ 2017 ಆಗಸ್ಟ್ 3ರಂದು ನಮ್ಮ ಪರವಾಗಿ ಆದೇಶ ನೀಡಿತು. ನಂತರ ಹಿರಿಯ ಸಿವಿಲ್ ನ್ಯಾಯಾಲಯದಲ್ಲೂ ಸಲ್ಲಿಸಿದ್ದ ಮೇಲ್ಮನವಿಯನ್ನೂ ವಜಾಗೊಳಿಸಿದೆ. ಎರಡು ನ್ಯಾಯಾಲಯಗಳಲ್ಲೂ ವಿಫಲವಾಗಿರುವ ಹೊನ್ನೂರಪ್ಪ, ಇದೀಗ ನಮ್ಮ ಕುಟುಂಬದ ಸದಸ್ಯರೊಂದಿಗೆ ಸಂಡೂರು ತಹಶೀಲ್ದಾರ್‌ರು, ಜಿಲ್ಲಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಸೇರಿಸಿ ಕೂಡ್ಲಿಗಿ ಹಿರಿಯ ಸಿವಿಲ್ ನ್ಯಾಯಾಲಯಲ್ಲಿ ಪ್ರಕರಣ ದಾಖಲಿಸಿದ್ದು ವಿಚಾರಣೆ ಹಂತದಲ್ಲಿದೆ ಎಂದವರು ವಿವರಿಸಿದರು.
ದಶಕಗಳಿಂದ ವಾಸ: ಆದರೆ ಕೆಲ ಸ್ವಹಿತಾಸಕ್ತಿಗಳು, ನಮ್ಮ ಕುಟುಂಬದ ರಾಜಕೀಯ ವಿರೋ ಧಿಗಳು, ಮಾಳಾಪುರದ 47.63 ಎಕರೆ ಜಮೀನು ತಮ್ಮದು. ಹಲವು ದಶಕಗಳಿಂದ ಅವರು ಉಳುಮೆ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಸೇರಿದ್ದ ಜಮೀನನ್ನು ಅಕ್ರಮವಾಗಿ ಮಾಡಿಸಿಕೊಂಡಿದ್ದಾರೆ ಎಂದೆಲ್ಲ ನಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ಪ್ರತಿಭಟನೆ, ಹೋರಾಟಗಳನ್ನೂ ನಡೆಸಿ ಮಾಧ್ಯಮಗಳಿಗೂ ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ. ನಾನು ಅಲ್ಲೇ ಹುಟ್ಟಿ ಅಲ್ಲೇ ಬೆಳೆದಿದ್ದೇನೆ. ನಮ್ಮ ಕುಟುಂಬ ಸುಮಾರು 100 ವರ್ಷಗಳಿಂದ ಅಲ್ಲೇ ವಾಸವಿದೆ. ಈವರೆಗೂ ಅಲ್ಲಿ ಯಾವುದೇ ಇಂಥ ಆರೋಪಗಳು ಬಂದಿಲ್ಲ. ಇದೀಗ ಕೆಲ ಸ್ವಹಿತಾಸಕ್ತಿಗಳು ಮಾಡುತ್ತಿದ್ದಾರೆ.
ಅದು ಸರ್ಕಾರಿ ಜಮೀನು ಆಗಿದ್ದರೆ ಅಥವಾ ಹೊನ್ನೂರಪ್ಪರ ಜಮೀನನ್ನು ಸರ್ಕಾರ ಪರಭಾರೆ ಮಾಡಿದ್ದರೆ ಈ ಬಗ್ಗೆ ಕಾನೂನಿನ ತೊಡಕಿದ್ದರೆ, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬಹುದು. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು ತಿಳಿಸಿದರು. ನಾವೇ ಕೊಡುತ್ತಿದ್ದೇವು: ಈ ರೀತಿ ಇಲ್ಲಸಲ್ಲದ ಆರೋಪ, ಹೋರಾಟ ಮಾಡುವ ಬದಲು ಅವರೇ ನಮ್ಮ ಬಳಿಗೆ ಬಂದು, ನಮಗೆ ಜಮೀನಿಲ್ಲ ಎಂದು ಕೇಳಿದ್ದರೆ ನಾವೇ ಬಿಟ್ಟುಕೊಡುತ್ತಿದ್ದೆವು. ಆದರೆ ಕೆಲವರ ಮಾತುಗಳನ್ನು ಕೇಳಿ ಈ ರೀತಿ ಮಾಧ್ಯಮಗಳಲ್ಲಿ ನಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ನಮಗೆ ನೋವಾಗಿದೆ. ಈ ವರೆಗೆ ನಮ್ಮ ಬಳಿ ಬಂದು ಅವರು ಕೇಳಿಲ್ಲ. ಅಂಥ ಪರಿಸ್ಥಿತಿ ಬಂದರೆ ಮುಂದೆ ನೋಡೋಣ ಎಂದ ಅವರು, ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಕುರಿತು ಜಿಲ್ಲಾ ಧಿಕಾರಿಗಳಿಗೆ ಎಲ್ಲ ರೀತಿಯ ಸ್ಪಷ್ಟನೆ ನೀಡಿದ್ದೇನೆ ಎಂದು ತಿಳಿಸಿದರು.
ಈ ವೇಳೆ ಸಂಡೂರು ಶಾಸಕ ಈ. ತುಕಾರಾಂ, ಜಿಲ್ಲಾಧ್ಯಕ್ಷ ಜಿ.ಎಸ್. ಮಹ್ಮದ್, ಜಿಪಂ ಸದಸ್ಯ ಎ.ಮಾನಯ್ಯ, ಕಾರ್ಯದರ್ಶಿ ಕಾಂತಿನೋಹ ವಿಲ್ಸನ್, ಮುಖಂಡ ಪಿ.ಜಗನ್ನಾಥ್ ಸೇರಿ ಹಲವರು ಇದ್ದರು.