ಬಳ್ಳಾರಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿ ಪಕ್ಷದ ತೊರೆದವರನ್ನು ಮಾತ್ರ ವಾಪಸ್ ಪಕ್ಷಕ್ಕೆ ಕರೆಯುವುದು ಮಾತ್ರವಲ್ಲ. ಅದಕ್ಕೂ ಮುನ್ನ ಪಕ್ಷವನ್ನು ತೊರೆದು ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಎಲ್ಲರನ್ನೂ ವಾಪಸ್ ಕರೆಯಬೇಕು ಎಂದು ಕೆಪಿಸಿಸಿ ಸದಸ್ಯ ಕಲ್ಲುಕಂಬ ಪಂಪಾಪತಿ ಅವರು ಕೆಪಿಸಿಸಿ ರಾಜ್ಯಾಧ್ಯಕ್ಷರಿಗೆ ಸಲಹೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷ ತೊರೆದ 17 ಜನ ಶಾಸಕರು ಬಿಜೆಪಿಯಿಂದ ಮತ್ತೆ ಕಾಂಗ್ರೆಸ್‌ಗೆ ಬಂದರೂ ತಮ್ಮ ಅಭ್ಯಂತರವೇನಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಹಾಗಾದರೆ ಪಕ್ಷ ತೊರೆದು ಬಿಜೆಪಿ ಸರ್ಕಾರ ರಚನೆಗೆ ಸಹಕಾರ ನೀಡಿದ 17 ಶಾಸಕರು ಮಾತ್ರವಲ್ಲ. ಈ ಹಿಂದೆ ಕಾಂಗ್ರೆಸ್ ಪಕ್ಷದವರೇ ಆಗಿದ್ದ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕರಾದ ಎಚ್.ಆರ್.ಗವಿಯಪ್ಪ, ಎನ್ .ಟಿ.ಬೊಮ್ಮಣ್ಣ ಸೇರಿ ಹಲವರು ಬಿಜೆಪಿ ಸೇರಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅಂತಹವರನ್ನೆಲ್ಲ ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳಬೇಕು ಎಂದು ತಿಳಿಸಿದರು.
ಕೇವಲ ಬೆಂಗಳೂರು ಸುತ್ತಮುತ್ತ ಇರುವ ಶಾಸಕರನ್ನಷ್ಟೇ ಅಲ್ಲ ನಮ್ಮ ಸುತ್ತಮುತ್ತ ಇರುವವರನ್ನು ಸಹ ಕರೆಯಬೇಕು. ಬೇರೆ ಕಡೆ ನಾಯಕರನ್ನು ನಮ್ಮ ಜಿಲ್ಲೆಗೆ ತರುವುದು ಬೇಡ. ಎಲ್ಲಿಂದಲೋ ಬಂದವರು ಇಲ್ಲಿ ಸ್ಪರ್ಧೆ ಮಾಡುವುದು ಬೇಡ. ಮುಂದಿನ ದಿನಗಳಲ್ಲಾದರೂ ಸ್ಥಳೀಯ ನಾಯಕರನ್ನು ಗುರುತಿಸುವಂತಾಗಬೇಕು ಎಂದು ಪ್ರತಿಪಾದಿಸಿದರು.
ಸೂಕ್ತ ರೀತಿಯಲ್ಲಿ ಬಳಕೆಯಾಗಲಿ: ಇದೇ ವೇಳೆ ಜಿಲ್ಲಾ ಖನಿಜ ನಿಧಿ (ಡಿಎಂಎಫ್) ಹಣ ಸೂಕ್ತ ರೀತಿಯಲ್ಲಿ ಬಳಕೆಯಾಗುತ್ತಿಲ್ಲ ಎಂದು ಆರೋಪಿಸಿದ ಕಲ್ಲುಕಂಬ ಪಂಪಾಪತಿಯವರು, ವೈದ್ಯಕೀಯ ಚಿಕಿತ್ಸೆ, ಶಿಕ್ಷಣ ವ್ಯವಸ್ಥೆ ಎಲ್ಲರಿಗೂ ಸಮಾನವಾಗಿ ದೊರೆಯುತ್ತಿಲ್ಲ. ಅದಕ್ಕಾಗಿ ಒಂದರಿಂದ 7ನೇ ತರಗತಿ ವರಗೆ ಶಿಕ್ಷಣ ನೀಡುವ ಶಾಲೆಗಳಿಗೆ ಎಲ್ಲ ರೀತಿ ಸೌಲಭ್ಯ ನೀಡಬೇಕು.
ಹಳ್ಳಿಗಳಲ್ಲಿ ಹರಿದು ಹೋಗುವ ನೀರನ್ನು ತಡೆಯಲು ಚೆಕ್ ಡ್ಯಾಂ ನಿರ್ಮಾಣ ಮಾಡಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಅವಶ್ಯಕತೆ, ಅಗತ್ಯತೆ ಇರುವ ಕಡೆಯಲ್ಲೆಲ್ಲ ಕೊಳವೆ ಬಾವಿಗಳನ್ನು ಉಚಿತವಾಗಿ ಕೊರೆಸಿ ಕೊಡಬೇಕು.
ಒಂದು ವೇಳೆ ಅಲ್ಲಿ ನೀರು ಬಂದು, ಬೆಳೆ ಬೆಳೆಯುವುದು ಖಚಿತವಾದಲ್ಲಿ ರೈತರೇ ಸಾಲಸೌಲಭ್ಯವನ್ನು ಪಾವತಿಸಿಕೊಳ್ಳುತ್ತಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಎಲ್.ಮಾರೆಣ್ಣ, ಗುಲಾಂ ನಬಿ, ಪಿ.ಜಗನ್ನಾಥ್ ಸೇರಿದಂತೆ ಹಲವರು ಇದ್ದರು.