ಬಳ್ಳಾರಿ: ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷೆಗಳಿಗೆ ಸಂಬಂ ಧಿಸಿದಂತೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದರಿಂದ ಜುಲೈ 4,5,6 ರಂದು ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಚಳವಳಿಯ ವರದಿಯನ್ನು ಶೀಘ್ರದಲ್ಲೇ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಜೆ.ಪಿ.ರವಿಕಿರಣ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎರಡೂ¾ರು ವಾರಗಳಿಂದ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಹಲವು ರೀತಿಯಲ್ಲಿ ಪ್ರಯತ್ನ ನಡೆಸಿದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಲಭಿಸಿಲ್ಲ.
ರಾಜ್ಯ ಸರ್ಕಾರ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುತ್ತಿದೆ. ಹೀಗಾಗಿ ರಾಜ್ಯಮಟ್ಟದ ವಿದ್ಯಾರ್ಥಿಗಳ ಹೋರಾಟ ಸಮಿತಿ ಮತ್ತು ಎಐಡಿಎಸ್‌ಒ ರಾಜ್ಯ ಸಮಿತಿ ಜುಲೈ 4, 5, 6ರಂದು 3 ದಿನಗಳ ಕಾಲ ರಾಜ್ಯದಾದ್ಯಂತ ಸಹಿ ಸಂಗ್ರಹ ಚಳವಳಿ ಹಮ್ಮಿಕೊಂಡಿತ್ತು ಎಂದು ವಿವರಿಸಿದರು. ಆನ್‌ಲೈನ್ ಹಾಗೂ ಆಫ್‌ಲೈನ್ ಸಮೀಕ್ಷೆಯಲ್ಲಿ 1,10,000 ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು.
ಈ ಪೈಕಿ ಶೇ.90 ರಷ್ಟು ಜನರು ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಕುರಿತ ವರದಿಯನ್ನು ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿದ್ಯಾರ್ಥಿಗಳ ಬೇಡಿಕೆಗಳ ಮನವಿ ಹಾಗೂ ಸಹಿ ಸಂಗ್ರಹದ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದರು.
ಸಹಿ ಸಂಗ್ರಹದ ಅಭಿಯಾನದಲ್ಲಿ ನಿವೃತ್ತ ಪ್ರಾಂಶುಪಾಲ ಅಲ್ಲಮಪ್ರಭು ಬೆಟ್ಟದೂರು, ಮಾಜಿ ಕುಲಪತಿ ಪ್ರೊ| ಡಾ| ಎಂ.ವಿ. ನದಕರ್ಣಿ, ಡಾ| ಎಂ.ಎಸ್.ತಿಮ್ಮಪ್ಪ, ಪ್ರೊ|ಡಾ| ಆರ್.ಎನ್. ಶ್ರೀನಿವಾಸ ಗೌಡ, ಕನ್ನಡ ಲೇಖಕ ಪ್ರೊ| ಪಿ.ವಿ. ನಾರಾಯಣ, ನಿವೃತ್ತ ಪ್ರಾಧ್ಯಾಪಕ ಪ್ರೊ| ಚಂದ್ರ ಪೂಜಾರಿ, ಪ್ರೊ| ರಾಜೇಂದ್ರ ಚೆನ್ನಿ ಭಾಗವಹಿಸಿದ್ದರು ಎಂದು ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕೆ.ಈರಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಗುರಳ್ಳಿ ರಾಜ, ಜಿಲ್ಲಾ ಉಪಾಧ್ಯಕ್ಷೆ ಜೆ.ಸೌಮ್ಯ, ಜಿಲ್ಲಾ ಸೆಕ್ರೆಟರಿಯಟ್ ಸದಸ್ಯರಾದ ಕೆ. ಈರಣ್ಣ, ಎಂ.ಶಾಂತಿ, ಸಿದ್ದು, ನಿಹಾರಿಕಾ ಮತ್ತು ವಿದ್ಯಾರ್ಥಿಗಳ ಹೋರಾಟ ಸಮಿತಿ ಸದಸ್ಯರು ಇದ್ದರು.