Advertisement

ಇಂದಿನಿಂದ ದೇವಾಲಯಗಳು ಓಪನ್‌

09:51 PM Jul 05, 2021 | Team Udayavani |

ಬಳ್ಳಾರಿ: ಕೋವಿಡ್‌ ಸೋಂಕು, ಲಾಕ್‌ಡೌನ್‌ನಿಂದಾಗಿ ಕಳೆದ ಎರಡುವರೆ ತಿಂಗಳಿಂದ ಮುಚ್ಚಲಾಗಿದ್ದ ದೇವಸ್ಥಾನಗಳನ್ನು ಅನ್‌ಲಾಕ್‌ 3ನಲ್ಲಿ ತೆರೆಯಲು ಅವಕಾಶ ನೀಡಿದ್ದು, ಜುಲೈ 5ರಿಂದ ದೇವಸ್ಥಾನಗಳು ಭಕ್ತರ ದರ್ಶನಕ್ಕೆ ಅಣಿಯಾಗಲಿವೆ.

Advertisement

ಗ್ರಾಮೀಣ ಭಾಗಕ್ಕೂ ಸಾರಿಗೆ ಬಸ್‌ಗಳ ಸಂಚಾರ, ಸಂಜೆ 5 ಗಂಟೆಗೆ ಇದ್ದ ಅವಧಿಯನ್ನು ರಾತ್ರಿ 9 ಗಂಟೆವರೆಗೆ ವಿಸ್ತರಿಸಿದೆ. ಕೋವಿಡ್‌ ಸೋಂಕು ಎರಡನೇ ಅಲೆ ದಿಢೀರನೇ ಆವರಿಸಿದ ಹಿನ್ನೆಲೆಯಲ್ಲಿ ನಿಯಂತ್ರಿಸಲು ಕಳೆದ ಏಪ್ರಿಲ್‌ ತಿಂಗಳಲ್ಲಿ ಲಾಕ್‌ಡೌನ್‌ ವಿಧಿಸಿದ ರಾಜ್ಯ ಸರ್ಕಾರ, ಏ. 21ರಿಂದ ಬಳ್ಳಾರಿ ಸೇರಿ ರಾಜ್ಯಾದ್ಯಂತ ಎಲ್ಲ ಶ್ರೇಣಿಯ ದೇವಸ್ಥಾನಗಳನ್ನು ಸಹ ಮುಚ್ಚುವಂತೆ ಆದೇಶ ಹೊರಡಿಸಿತು.

ಪರಿಣಾಮ ಅಂದಿನಿಂದ ಬಾಗಿಲು ಹಾಕಲಾಗಿದ್ದ ದೇವಸ್ಥಾನಗಳನ್ನು ಜುಲೈ 5ರಿಂದ ತೆರೆಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಭಕ್ತರಿಗೆ ದರ್ಶನ ಮತ್ತು ಆರತಿಗೆ ಮಾತ್ರ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲ ದೇವಸ್ಥಾನಗಳನ್ನು ಸಿದ್ಧಪಡಿಸುವ ಕಾರ್ಯ ಭಾನುವಾರ ಭರದಿಂದ ಸಾಗಿದೆ. ಎಲ್ಲ ದೇವಸ್ಥಾನಗಳನ್ನು ಸ್ಯಾನಿಟೈಸರ್‌ ಸಿಂಪಡಿಸಿ, ನೀರಿನಿಂದ ತೊಳೆದು ಸ್ವತ್ಛಗೊಳಿಸಲಾಗುತ್ತಿದೆ. ಜತೆಗೆ ದೇವಸ್ಥಾನಗಳ ಮುಂದೆ ಜನರು ಗುಂಪು ಸೇರದಂತೆ ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಭಕ್ತರು ಸರತಿ ಸಾಲಲ್ಲಿ ಆಗಮಿಸಲು ಕ್ಯೂಲೈನ್‌ ಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಗುಂಪುು ಗುಂಪಾಗಿ ಸೇರದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ನಗರದ ಕನಕದುರ್ಗಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅ ಧಿಕಾರಿ ಹನುಮಂತಪ್ಪ ತಿಳಿಸಿದರು.

ಪ್ರಮುಖ ದೇವಸ್ಥಾನಗಳು: ಬಳ್ಳಾರಿ/ವಿಜಯನಗರ ಜಿಲ್ಲೆಗಳ ಏ ಶ್ರೇಣಿ ಪ್ರಮುಖ ದೇವಸ್ಥಾನಗಳಾದ ಬಳ್ಳಾರಿ ಕನಕದುರ್ಗಮ್ಮ, ಕುರುಗೋಡು ದೊಡ್ಡಬಸವೇಶ್ವರ, ಎತ್ತಿನಬೂದಿಹಾಳ್‌ ಕಟ್ಟೆಬಸವೇಶ್ವರ, ಹಂಪಿ ವಿರೂಪಾಕ್ಷೇಶ್ವರ, ಬುಕ್ಕಸಾಗರ ಏಳೆಡೆ ನಾಗಪ್ಪ, ಕೊಟ್ಟೂರು ಗುರುಬಸವೇಶ್ವರ, ಉಜ್ಜಯಿನಿ ಮರುಳಸಿದ್ದೇಶ್ವರ, ಉಚ್ಚಂಗಿ ದುರ್ಗ ಉತ್ಸವಾಂಬ, ತೂಲಹಳ್ಳಿ ಬಸವೇಶ್ವರ, ಮೈಲಾರ ಲಿಂಗೇಶ್ವರ ಕುರುವತ್ತಿ ಮಲ್ಲಿಕಾರ್ಜುನ, ಬಸವೇಶ್ವರ ದೇವಸ್ಥಾನಗಳು, ಬಿ ಶ್ರೇಣಿಯ ಬಳ್ಳಾರಿಯ ಕೋಟೆ ಮಲ್ಲೇಶ್ವರ, ನಾಗೇಶ್ವರ, ಸಂಡೂರು ಕುಮಾರಸ್ವಾಮಿ, ಸಿರುಗುಪ್ಪದ ಬಲಕುಂದಿ ಬನ್ನಿ ಮಹಾಂಕಾಳಮ್ಮ, ಹೊಸಪೇಟೆಯ ಹೊಸೂರಮ್ಮ, ಊರಮ್ಮ, ವಕರಾಯ, ಬೊಮ್ಮಘಟ್ಟ ಹುಲಿಕುಂಟೇಶ್ವರ, ಮದಲಗಟ್ಟೆ ಆಂಜನೇಯ ದೇವಸ್ಥಾನಗಳಲ್ಲಿ ಭಕ್ತರ ದರ್ಶನಕ್ಕಾಗಿ ಸಿದ್ದತಾ ಕಾರ್ಯ ಭರದಿಂದ ಸಾಗಿದೆ.

Advertisement

ದರ್ಶನ, ಆರತಿಗೆ ಅವಕಾಶ: ಕೋವಿಡ್‌ ಸೋಂಕು, ಲಾಕ್‌ಡೌನ್‌ ಪರಿಣಾಮ ಎರಡೂವರೆ ತಿಂಗಳ ಬಳಿಕ ದೇವಸ್ಥಾನಗಳನ್ನು ತೆರೆಯಲು ಅವಕಾಶ ನೀಡಿರುವ ರಾಜ್ಯ ಸರ್ಕಾರ, ಕೇವಲ ಭಕ್ತರಿಗೆ ದರ್ಶನ, ಆರತಿಗೆ ಮಾತ್ರ ಅವಕಾಶ ಕಲ್ಪಿಸಿದೆ. ದೇವರ ದರ್ಶನಕ್ಕಾಗಿ ದೇವಸ್ಥಾನಗಳಿಗೆ ಹೋಗುವ ಭಕ್ತರು, ಹೂವು, ಹಣ್ಣು, ಕಾಯಿ, ಉಡಿ ತುಂಬುವ ಸಾಮಾನು ಸೇರಿ ಇನ್ನಿತರೆ ಯಾವುದೇ ಸಾಮಾನುಗಳನ್ನು ದೇವಸ್ಥಾನಕ್ಕೆ ಕೊಂಡೊಯ್ಯುವಂತಿಲ್ಲ.

ಅಲ್ಲದೇ, ದೇವಸ್ಥಾನದಲ್ಲಿ ಎಲೆಪೂಜೆ, ಅಭಿಷೇಕ, ಅರ್ಚನೆ, ಕುಂಭಾ, ಗಂಡಾದೀಪ, ಜವಳ ಕಾರ್ಯಕ್ರಮ, ಉರುಳುಸೇವೆ, ಪ್ರಸಾದ ವಿತರಣೆ ಸೇರಿದಂತೆ ಇನ್ನಿತರೆ ಸೇವೆಗಳಿಗೆ ಅವಕಾಶ ನೀಡಿಲ್ಲ. ಕೇವಲ ದೇವರ ದರ್ಶನ, ಆರತಿಗೆ, ಹುಂಡಿಯಲ್ಲಿ ಕಾಣಿಕೆ ಹಾಕಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಭಾಗಕ್ಕೂ ಬಸ್‌ ಸಂಚಾರ: ಅನ್‌ಲಾಕ್‌ 1, 2ರಲ್ಲಿ ಕೇವಲ ತಾಲೂಕು ಕೇಂದ್ರಗಳಿಗೆ ನಿಗದಿತ ಪ್ರಯಾಣಿಕರೊಂದಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ ಟಿಸಿ ಬಸ್‌ಗಳನ್ನು ಅನ್‌ಲಾಕ್‌ 3ರಲ್ಲಿ ಗ್ರಾಮೀಣ ಭಾಗಕ್ಕೂ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು, ಜುಲೈ 5ರಿಂದ ಸಂಚಾರ ಆರಂಭಿಸಲಿವೆ. ಜತೆಗೆ ಶೇ. 50ರಷ್ಟು ಇದ್ದ ಪ್ರಯಾಣಿಕರನ್ನು ಪೂರ್ಣ ಪ್ರಮಾಣದಲ್ಲಿ ಹತ್ತಿಸಿಕೊಳ್ಳಲು ಅವಕಾಶ ನೀಡಿದೆ.

ಹೀಗಾಗಿ ಪ್ರಯಾಣಿಕರ ಲಭ್ಯತೆ ಮೇರೆಗೆ ಗ್ರಾಮಗಳಿಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ರಾಜಗೋಪಾಲ್‌ ಪುರಾಣಿಕ್‌ ತಿಳಿಸಿದ್ದಾರೆ. 9 ಗಂಟೆವರೆಗೆ ವಿಸ್ತರಣೆ: ಇನ್ನು ಅನ್‌ಲಾಕ್‌ 1,2ರಲ್ಲಿ ಎಲ್ಲ ವಿಧದ ವಾಣಿಜ್ಯ ಮಳಿಗೆಗಳು, ಹೋಟೆಲ್‌ ಗಳು ಸಂಜೆ 5 ಗಂಟೆವರೆಗೆ ಮಾತ್ರ ತೆರೆಯಲು ಅವಕಾಶ ನೀಡಿತ್ತು. ಬೇಸಿಗೆ ದಿನಗಳಾಗಿದ್ದರಿಂದ ಸಂಜೆ ಹೊತ್ತಲ್ಲೇ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಯುವುದರಿಂದ ಸಂಜೆ 5 ಗಂಟೆಗೆ ಕೊನೆಗೊಳಿಸುವುದು ಮಾಲೀಕರಿಗೆ ತಲೆನೋವಾಗಿತ್ತು. ಈ ಅವ ಧಿಯನ್ನು ರಾತ್ರಿ 9 ಗಂಟೆವರೆಗೆ ವಿಸ್ತರಿಸಿರುವುದು ವಾಣಿಜ್ಯ ಮಳಿಗೆಗಳ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next