Advertisement

ಜೀವ ಸಂಕುಲ ಉಳಿವಿಗೆ ಪರಿಸರ ರಕ್ಷಿಸಿ: ಮಂತ್ರಾಲಯ ಶ್ರೀ

09:10 PM Jul 02, 2021 | Team Udayavani |

ಸಿರುಗುಪ್ಪ: “ವೃಕ್ಷೊ ರಕ್ಷಿತ ರಕ್ಷಿತಃ’ ಅಂದರೆ ಮರಗಳನ್ನು ನೀವು ರಕ್ಷಿಸಿದರೆ ಮರಗಳು ನಿಮ್ಮನ್ನು ರಕ್ಷಿಸುತ್ತವೆ ಎನ್ನುವುದು ಇದರ ಸೂಕ್ತಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಪರಿಸರದಲ್ಲಿ ಬೆಳೆದಿರುವ ಗಿಡ-ಮರ ಕಡಿಯದೇ ಅವುಗಳನ್ನು ರಕ್ಷಣೆ ಮಾಡಬೇಕೆಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿ ಪತಿ ಶ್ರೀ ಸುಭುದೇಂದ್ರ ತೀರ್ಥರು ತಿಳಿಸಿದರು.

Advertisement

ತಾಲೂಕಿನ ಬಿಜೆಪಿ ಯುವ ಮೋರ್ಚಾ ಘಟಕದಿಂದ ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಗುರುವಾರ ಸಾವಿರದ ಒಂದು ಸಸಿ ನೆಡುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಪರಿಸರ ಉಳಿದರೆ ಮಾತ್ರ ಪ್ರತಿಯೊಂದು ಜೀವಿಯು ಬದುಕಲು ಸಾಧ್ಯವಾಗುತ್ತದೆ. ಒಮ್ಮೆ ನಾಶವಾದ ಪರಿಸರವನ್ನು ಮತ್ತೆ ಸೃಷ್ಟಿಸಲು ಸಾವಿರಾರು ವರ್ಷಗಳೇ ಬೇಕಾಗುತ್ತದೆ ಎಂದು ಹೇಳಿದರು.

ದೇಶವು ಸಮೃದ್ಧಿಯಿಂದರಲು ಪ್ರತಿಯೊಬ್ಬರು ಪರಿಸರ ಪ್ರೀತಿಸಬೇಕು. ಆಗ ಮಾತ್ರ ಪರಿಸರ ಉಳಿಯಲು ಸಾಧ್ಯವಾಗುತ್ತದೆ. ಮನುಷ್ಯರು ತಮ್ಮ ದುರಾಸೆಯಿಂದ ಪರಿಸರವನ್ನು ನಾಶಮಾಡಲು ಮುಂದಾದರೆ ಪ್ರಕೃತಿಯೇ ತನ್ನ ರೌದ್ರಾವತಾರ ತೋರಿಸುತ್ತದೆ. ಆದ್ದರಿಂದ ಪರಿಸರ ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಂದು ದೇಶ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲು ಆ ದೇಶದಲ್ಲಿ ಶೇ.33ರಷ್ಟು ಅರಣ್ಯ ಪ್ರದೇಶ ಇರಲೇಬೇಕು. ಆಗ ಮಾತ್ರ ಕಾಲಕಾಲಕ್ಕೆ ಉತ್ತಮ ಮಳೆ ಬರಲು ಸಾಧ್ಯವಾಗುತ್ತದೆ. ಇರುವ ಕಾಡು ಉಳಿಸಿ ಇನ್ನು ಹೆಚ್ಚು ಅರಣ್ಯ ಬೆಳೆಸಲು ಮುಂದಾಗಬೇಕು ಎಂದು ಹೇಳಿದರು. ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಎಂ.ಎಸ್‌. ಸಿದ್ದಪ್ಪ, ಮುಖಂಡ ಎಚ್‌.ಜೆ. ಹನುಮಂತಯ್ಯ, ಮಧುಸೂಧನಶೆಟ್ಟಿ ಮತ್ತು ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next