ಪಿ. ಸತ್ಯನಾರಾಯಣ
ಹೊಸಪೇಟೆ: ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದ್ದು ಶನಿವಾರ ಒಂದೇ ದಿನದಲ್ಲಿ ಎರಡು ಟಿಎಂಸಿಯಷ್ಟು ನೀರು ಹರಿದು ಬಂದಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಉತ್ತಮ ಮಳೆಯಿಂದಾಗಿ ಜಲಾಶಯಕ್ಕೆ ಒಳ ಹರಿದು ಬರುವ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ.
ಈಗಾಗಲೇ ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯ ಭರ್ತಿಯಾಗಿದ್ದು, ಅಲ್ಲಿಂದ ಅಧಿಕ ನೀರನ್ನು ನದಿಗೆ ಹರಿಬಿಡಲಾಗಿದೆ. ಜೊತೆಗೆ ಸಿಂಗಟಾಲೂರು ಬ್ಯಾರೇಜ್‌ನಿಂದ ಸಹ ನೀರು ಹರಿದು ಬರುತ್ತಿದೆ. ನೀರಿನ ಸಂಗ್ರಹ ಹೆಚ್ಚಳ: ಜಲಾಶಯದ ನೀರಿನ ಮಟ್ಟ ಗರಿಷ್ಠ 1633 ಅಡಿ, ಇಂದಿನ ಮಟ್ಟ 1593 ಅಡಿ, ಸಂಗ್ರಹ 12.447 ಟಿಎಂಸಿ, ಒಳಹರಿವು 21169 ಕ್ಯೂಸೆಕ್, ಹೊರ ಹರಿವು 233 ಕ್ಯೂಸೆಕ್ ಇದೆ.
ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರೆದಿರುವುದರಿಂದ ಇನ್ನೂ ಎರಡು ದಿನಗಳಲ್ಲಿ 5 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬರುವ ಅಂದಾಜಿದೆ. ಕಳೆದ ವರ್ಷ ಈ ದಿನದಲ್ಲಿ ಜಲಾಶಯ ನೀರಿನ ಮಟ್ಟ 1584 ಅಡಿ, ಒಳಹರಿವು 132 ಕ್ಯೂಸೆಕ್, ಹೊರ ಹರಿವು 280 ಕ್ಯೂಸೆಕ್ ದಾಖಲಾಗಿತ್ತು.
ಜುಲೈನಲ್ಲಿ ಕಾಲುವೆಗೆ ನೀರು: ತುಂಗಭದ್ರಾ ಜಲಾನಯದ ಪ್ರದೇಶದಲ್ಲಿ ಬೀಳುತ್ತಿರುವ ಉತ್ತಮ ಮಳೆಯಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. 50 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾದರೆ, ಜುಲೈ ತಿಂಗಳಲ್ಲಿ ಕಾಲುವೆಗಳಿಗೆ ನೀರು ಹರಿಸಲು ತುಂಗಭದ್ರಾ ಮಂಡಳಿ ಚಿಂತನೆ ನಡೆಸಿದೆ. ಕಳೆದ ವರ್ಷ ಹೋಲಿಕೆ ಮಾಡಿದರೆ, ಈ ವರ್ಷ ಜಲಾಶಯದಲ್ಲಿ ಉತ್ತಮ ಒಳ ಹರಿವು ಹರಿದು ಬರುತ್ತಿದೆ.
ಕಳೆದ ವರ್ಷದಿಂದ ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ರೈತಾಪಿ ಜನರು ನೆಮ್ಮದಿ ನಿಟ್ಟಿಸಿರು ಬಿಟ್ಟಿದ್ದಾರೆ. 34.923 ಹೆಕ್ಟೇರ್ ಪ್ರದೇಶವನ್ನು ವ್ಯಾಪಿಸಿಕೊಂಡಿರುವ ತುಂಗಭದ್ರಾ ಜಲಾಶಯ ಮೀನುಗಾರಿಕೆ, ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗಿದೆ.