Advertisement

ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್‌ ಘೋಷಿಸಿ

09:53 PM Jun 09, 2021 | Team Udayavani |

ಬಳ್ಳಾರಿ: ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಅತಿಥಿ ಶಿಕ್ಷಕರಿಗೆ ಸರ್ಕಾರ ಕೂಡಲೇ ಆರ್ಥಿಕ ಪ್ಯಾಕೇಜನ್ನು ಘೋಷಿಸಬೇಕು. ನೇಮಕಾತಿಯಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿ ಅತಿಥಿ ಶಿಕ್ಷಕರ ಹೋರಾಟ ಸಮಿತಿ, ಅಖೀಲ ಭಾರತ ಶಿಕ್ಷಣ ಉಳಿಸಿ ಸಮಿತಿಗಳಿಂದ ಮಂಗಳವಾರ ರಾಜ್ಯಾದ್ಯಂತ ಆನ್‌ಲೈನ್‌ ಪ್ರತಿಭಟನೆ ನಡೆಸಲಾಯಿತು.

Advertisement

ರಾಜ್ಯ ಸರ್ಕಾರ ಅತಿಥಿ ಶಿಕ್ಷಕರನ್ನು ಮಲತಾಯಿ ಧೋರಣೆಯಿಂದ ನೋಡುತ್ತಿದೆ. ಅತಿಥಿ ಶಿಕ್ಷಕರಾಗಿ ಶಿಕ್ಷಣ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಹಲವಾರು ಶಾಲೆಗಳ ಬೆನ್ನೆಲುಬಾಗಿ ನಿಂತಿದ್ದಾರೆ. ಅತಿಥಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದಲ್ಲಿ ಹಗಲಿರುಳು ದುಡಿಯುತ್ತಾ ಸರ್ಕಾರಿ ಶಾಲೆಗಳ ಪ್ರಗತಿ ಹಾಗೂ ಗ್ರಾಮೀಣ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದೇವೆ.

ಮಾನವೀಯತೆ ದೃಷ್ಟಿಯಿಂದ ಮತ್ತು ನೈತಿಕವಾಗಿಯೂ ಕೂಡಾ ಅತಿಥಿ ಶಿಕ್ಷಕರ ಹಿತ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕೊರೊನಾ ಸಂಕಷ್ಟ ಮತ್ತು ಆರ್ಥಿಕ ಬಿಕ್ಕಟ್ಟುಗಳಿಂದಾಗಿ, ಉದ್ಯೋಗಗಳು ನಾಶವಾಗುತ್ತಿರುವ ಈ ದಿನಗಳಲ್ಲಿ ಸರ್ಕಾರ ಅತಿಥಿ ಶಿಕ್ಷಕರ ಬೆನ್ನಿಗೆ ನಿಲ್ಲಬೇಕಿದೆ.

ಹಿಂದಿನ ಎಲ್ಲ ಸರ್ಕಾರಗಳು ಶಿಕ್ಷಕರ ನೇಮಕಾತಿಯನ್ನು ಕಾಲಕಾಲಕ್ಕೆ ಮಾಡಿಕೊಳ್ಳುತ್ತಾ ಬಂದಿದ್ದರೆ, ಇಷ್ಟೊತ್ತಿಗೆ ನಮ್ಮಲ್ಲಿ ಹಲವರು ಖಾಯಂ ಶಿಕ್ಷಕರಾಗಿರುತ್ತಿದ್ದೇವು. ಅವಶ್ಯಕವಿರುವಷ್ಟು ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳದೇ ಇರುವುದರಿಂದಲೇ ನಾವು ಹಲವು ವರ್ಷಗಳಿಂದ ಅತೀ ಕಡಿಮೆ ಸಂಬಳಕ್ಕೆ ಬೋಧನೆಯನ್ನು ಮಾಡುತ್ತ ಬಂದಿದ್ದೇವೆ. ಹಲವು ಬಾರಿ ಸರಿಯಾದ ಸಂಬಳವೂ ಇಲ್ಲದೆ, ಸೇವಾ ಭದ್ರತೆಯು ಇಲ್ಲದೆ ಸಂದಿಗ್ಧ ಪರಿಸ್ಥಿತಿ ನಮ್ಮದಾಗಿದೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ ಎಲ್ಲ ಅತಿಥಿ ಶಿಕ್ಷಕರಿಗೆ ಕೋವಿಡ್‌-19 ವಿಶೇಷ ಆರ್ಥಿಕ ಪ್ಯಾಕೇಜನ್ನು ಘೋಷಿಸಬೇಕು. ಮುಂಬರುವ ಎಲ್ಲ ನೇಮಕಾತಿಗಳಲ್ಲಿ ಅತಿಥಿ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡಬೇಕು. ಅತಿಥಿ ಶಿಕ್ಷಕರನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಖಾಯಂ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು. ನಿರ್ದಿಷ್ಟ ಕೋಟಾ ಕಾಯ್ದಿರಿಸುವ/ವಿಶೇಷ ಅಂಕ (ವೇಟೇಜ್‌) ನೀಡುವ ಹಾಗೂ ವಯೋಮಿತಿ ಏರಿಸುವ ಹಾಗೂ ಇತ್ಯಾದಿ ಪ್ರಜಾತಾಂತ್ರಿಕ ಪದ್ಧತಿಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ತಕ್ಷಣವೇ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಬೇಕು.

Advertisement

ಈಗಾಗಲೇ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಕೆಲಸದಿಂದ ತೆಗೆದು ಹಾಕದಂತೆ ಹಾಗೂ ಅವರೆಲ್ಲರಿಗೂ ಉದ್ಯೋಗ ಭದ್ರತೆ ನೀಡುವಂಥ ಸೂಕ್ತ ಸರ್ಕಾರಿ ಆದೇಶವನ್ನು ಈ ಕೂಡಲೇ ಹೊರಡಿಸಬೇಕು. ಸಂಬಳವನ್ನು ಹೆಚ್ಚಿಸಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದವರು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಸಮಿತಿ ಸದಸ್ಯರಾದ ವಿ.ಎನ್‌. ರಾಜಶೇಖರ, ರಾಜೇಶ ಭಟ್‌, ವೀರಭದ್ರಪ್ಪ, ಆರ್‌. ಕೆ.ಪ್ರಮೋದ್‌, ಚಿತ್ರಲೇಕ, ಹಣಮಂತ, ಜಾವೀದ, ಮಹಾದೇವ, ಗಣಪತಿ, ಗಂಗಾಧರ, ರುದ್ರಗೌಡ, ಯಲ್ಲಮ್ಮಾ, ಚಂದ್ರಿಕಾ, ಜಯಮಾಲಾ, ವರಣ್ಣ, ಪ್ರಭಾಕರ, ಕೃಷ್ಣಾನಾರಾಯಣ, ನಿಂಗಪ್ಪಾ, ಭೂದೇವಿ, ನಾಗರತ್ನಾ, ಸಂಗೀತಾ, ಶ್ರೀದೇವಿ, ಶ್ರುತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next