Advertisement

ಗಣಿನಾಡಿನ 380 ಗ್ರಾಮಗಳು ಕೊರೊನಾ ಮುಕ್ತ

09:44 PM Jun 07, 2021 | Team Udayavani |

„ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ: ಬಳ್ಳಾರಿ/ವಿಜಯನಗರ ಜಿಲ್ಲೆಗಳ ಗ್ರಾಮೀಣ ಭಾಗಕ್ಕೂ ಸಂಚಕಾರ ತಂದೊಡ್ಡಿದ್ದ ಕೋವಿಡ್‌ ಸೋಂಕು 2ನೇ ಅಲೆ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಉಭಯ ಜಿಲ್ಲೆಗಳಲ್ಲಿ 380 ಗ್ರಾಮಗಳಲ್ಲಿ ಒಂದು ಪ್ರಕರಣ ಪತ್ತೆಯಾಗದೆ ಕೋವಿಡ್‌ನಿಂದ ಸಂಪೂರ್ಣ ಮುಕ್ತವಾಗಿವೆ.

ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಮಹಮ್ಮಾರಿ ಕೋವಿಡ್‌ ಸೋಂಕು ಮೊದಲನೇ ಅವ ಧಿಗಿಂತ ಎರಡನೇ ಅಲೆಯಲ್ಲಿ ಹೆಚ್ಚು ಸಾವು-ನೋವು ಸಂಭವಿಸಿವೆ. ಮೊದಲ ಅವಧಿಯಲ್ಲಿ ನಗರ ಪ್ರದೇಶಗಳನ್ನು ಹೆಚ್ಚು ಆವರಿಸಿದ್ದ ಸೋಂಕು ಎರಡನೇ ಅವ ಧಿಯಲ್ಲಿ ಗ್ರಾಮೀಣ ಭಾಗಕ್ಕೂ ವ್ಯಾಪಿಸಿದ್ದು, ಜನರು ತತ್ತರಿಸುವಂತೆ ಮಾಡಿದೆ.

ಸೋಂಕಿನಿಂದ ಸಂಭವಿಸಿದ ಸಾವಿಗೆ ಬೆಚ್ಚಿಬಿದ್ದ ಹಲವು ಗ್ರಾಮಗಳ ಜನರು, ಮುಖಂಡರು ಗ್ರಾಮಕ್ಕೆ ಸ್ವಯಂ ಲಾಕ್‌ ಡೌನ್‌ ವಿ ಧಿಸಿಕೊಂಡಿದ್ದಾರೆ. ಆದರೆ, ಸೋಂಕು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಗ್ರಾಮಗಳಲ್ಲೂ ನಿಧಾನವಾಗಿ ಸೋಂಕು ಕಡಿಮೆಯಾಗುತ್ತಿದ್ದು, ನಿಯಂತ್ರಣಕ್ಕೆ ಬರುತ್ತಿದೆ.ಹಲವು ಗ್ರಾಮಗಳು ಸೋಂಕಿನಿಂದ ಮುಕ್ತವಾಗಿವೆ.

ಕುಟುಂಬ ಸಂರಕ್ಷಣಾ ತಂಡ ರಚನೆ: ಗ್ರಾಮಗಳಲ್ಲಿ ವ್ಯಾಪಕವಾಗಿ ಹರಡಿದ್ದ ಸೋಂಕನ್ನು ನಿಯಂತ್ರಿಸಲು ಕುಟುಂಬ ಆರೋಗ್ಯ ಸಂರಕ್ಷಣಾ ತಂಡ ಪ್ರಮುಖ ಪಾತ್ರ ವಹಿಸಿದೆ. ಆಯಾ ಗ್ರಾಮದ ಕರವಸೂಲಿಗಾರರು, ನೀರುಗಂಟಿಗಳು, ಆಶಾ-ಅಂಗನಾಡಿ ಕಾರ್ಯಕರ್ತೆಯರು, ನರೇಗಾ ಕಾಯಕಬಂಧುಗಳು, ಬಿಎಫ್‌ಟಿಗಳು, ಸ್ವಸಹಾಯ ಗುಂಪಿನ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿ ಕಾರಿಗಳು, ಗ್ರಾಮ ಸಹಾಯಕರು, ಪದವೀಧರರು, ಆಸಕ್ತಿಯುಳ್ಳ ಯುವಕರು ಈ ಕುಟುಂಬ ಆರೋಗ್ಯ ಸಂರಕ್ಷಣಾ ತಂಡದ ಸದಸ್ಯರನ್ನು ಪ್ರತಿ 50 ಕುಟುಂಬಕ್ಕೆ ಒಬ್ಬರನ್ನು ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.

Advertisement

ಇವರು ತಮ್ಮ ವ್ಯಾಪ್ತಿಯ ಪ್ರತಿ ಕುಟುಂಬದ ಮೇಲೆ ಪ್ರತಿದಿನ ನಿಗಾವಹಿಸಿ, ಆ ಕುಟುಂಬದ ಸದಸ್ಯರಲ್ಲಿ ಜ್ವರ, ಕೆಮ್ಮು, ನೆಗಡಿಗಳಂತಹ ಲಕ್ಷಣಗಳು ಕಂಡುಬಂದಲ್ಲಿ ಆರಂಭದಲ್ಲೇ ಪತ್ತೆಹಚ್ಚಿ ಮೂರು ದಿನಗಳಿಗೆ ಔಷಧಗಳ ಕಿಟ್‌ ಗಳನ್ನು ವಿತರಿಸಲಿದ್ದಾರೆ. ಔಷಧಗಳನ್ನು ಸೇರಿಸಿದ ಬಳಿಕವೂ ಜ್ವರ, ನೆಗಡಿ, ಕೆಮ್ಮು ರೋಗಲಕ್ಷಣಗಳು ಕಂಡುಬಂದಲ್ಲಿ ಅಂತಹವರನ್ನು ಸ್ಥಳೀಯವಾಗಿಯೇ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಿದ್ದಾರೆ.

ಪಾಸಿಟಿವ್‌ ಬಂದಲ್ಲಿ ಸೋಂಕಿತರಲ್ಲಿ ಸೋಂಕನ್ನು ಆಧರಿಸಿ ಅವರಿಗೆ ಕೋವಿಡ್‌ ಕೇರ್‌ ಸೆಂಟರ್‌, ಸಮುದಾಯ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆ ಕೊಡಿಸಲಿದ್ದಾರೆ. ಆರ್ಥಿಕವಾಗಿ ದುರ್ಬಲ ಕುಟುಂಬದ ಸೋಂಕಿತರಿಗೆ ಊಟ, ಉಪಾಹಾರದ ವ್ಯವಸ್ಥೆಯೂ ಗ್ರಾಪಂ ವತಿಯಿಂದ ಮಾಡಲಾಗುತ್ತಿದೆ. ಇದು ಗ್ರಾಮಗಳಲ್ಲಿ ನಿಧಾನವಾಗಿ ಸೋಂಕು ನಿಯಂತ್ರಣಕ್ಕೆ ಬರಲು ಪ್ರಮುಖ ಕಾರಣವಾಗಿದೆ.

3462 ಸಕ್ರಿಯ ಪ್ರಕರಣಗಳು: ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ 1043 ಗ್ರಾಮಗಳಲ್ಲಿ ಈವರೆಗೆ 15037 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು 11575 ಜನರು ಗುಣಮುಖರಾಗಿದ್ದಾರೆ. ಬಳ್ಳಾರಿ ತಾಲೂಕು 294, ಹಡಗಲಿ 373, ಹ.ಬೊ.ಹಳ್ಳಿ 383, ಹರಪನಹಳ್ಳಿ 649, ಹೊಸಪೇಟೆ 199, ಕಂಪ್ಲಿ 159, ಕೊಟ್ಟೂರು 200, ಕೂಡ್ಲಿಗಿ 266, ಕುರುಗೋಡು 289, ಸಂಡೂರು 253, ಸಿರುಗುಪ್ಪ 397 ಸೇರಿ ಒಟ್ಟು 3462 ಸಕ್ರಿಯ ಪ್ರಕರಣಗಳು ಇವೆ. ಈ ಪೈಕಿ 92 ಗ್ರಾಮಗಳಲ್ಲಿ 10ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು, 142 ಗ್ರಾಮಗಳಲ್ಲಿ 5ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು, 429 ಗ್ರಾಮಗಳಲ್ಲಿ 5ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ಇವೆ.

380 ಗ್ರಾಮಗಳು ಕೋವಿಡ್‌ ಮುಕ್ತ: ಇನ್ನು ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ನಿಧಾನವಾಗಿ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ 380 ಗ್ರಾಮಗಳು ಕೋವಿಡ್‌ ಸೋಂಕಿನಿಂದ ಮುಕ್ತಗೊಂಡಿವೆ. ಈ ಪೈಕಿ ಬಳ್ಳಾರಿ ತಾಲೂಕು 14, ಹಡಗಲಿ 48, ಹ.ಬೊ.ಹಳ್ಳಿ 27, ಹರಪನಹಳ್ಳಿ 78, ಹೊಸಪೇಟೆ 18, ಕಂಪ್ಲಿ 13, ಕೊಟ್ಟೂರು 18, ಕೂಡ್ಲಿಗಿ 79, ಸಂಡೂರು 59, ಸಿರುಗುಪ್ಪ 26 ಸೇರಿ ಒಟ್ಟು 380 ಗ್ರಾಮಗಳಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿಯ ಜೂ. 4ರ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ. ಇನ್ನು ಕುರುಗೋಡು ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಕೋವಿಡ್‌ ವ್ಯಾಪಿಸಿದ್ದು, ಯಾವುದೇ ಗ್ರಾಮ ಕೋವಿಡ್‌ ಮುಕ್ತವಾಗಿಲ್ಲದಿರುವುದು

ಗಮನಾರ್ಹ. 583 ಸಾವು: ಉಭಯ ಜಿಲ್ಲೆಗಳಲ್ಲಿ ಕೋವಿಡ್‌ ಎರಡನೇ ಅಲೆಗೆ ಬಳ್ಳಾರಿ ತಾಲೂಕು 91, ಹಡಗಲಿ 53, ಹ.ಬೊ.ಹಳ್ಳಿ 48, ಹರಪನಹಳ್ಳಿ 70, ಹೊಸಪೇಟೆ 53, ಕಂಪ್ಲಿ 17, ಕೊಟ್ಟೂರು 18, ಕೂಡ್ಲಿಗಿ 47, ಕುರುಗೋಡು 62, ಸಂಡೂರು 56, ಸಿರುಗುಪ್ಪ 68 ಸೇರಿ ಒಟ್ಟು 583 ಜನರು ಸೋಂಕಿಗೆ ಮೃತಪಟ್ಟಿದ್ದಾರೆ. ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದರಿಂದ ಸಾವಿನ ಪ್ರಮಾಣವೂ ಕಡಿಮೆಯಾಗುತ್ತಿರುವುದು ಗಮನಾರ್ಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next