ಬಳ್ಳಾರಿ: ಕಳೆದ ಸಚಿವ ಸಂಪುಟದಲ್ಲಿ ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಮಾಡಲು ಒಪ್ಪಿಗೆ ಸೂಚಿಸಿದ್ದ ರಾಜ್ಯ ಸರ್ಕಾರ, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಮೀನು ಪರಭಾರೆ ವಿಷಯ ಕೈಬಿಟ್ಟಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಿಂದಾಲ್ ಸಂಸ್ಥೆಗೆ 3667 ಎಕರೆ ಜಮೀನು ಪರಭಾರೆ ಮಾಡಲು ಹಿಂದಿನ ಕಾಂಗ್ರೆಸ್ -ಜೆಡಿಎಸ್ ಸರ್ಕಾರಗಳು ಕೈಗೊಂಡಿದ್ದ ನಿರ್ಣಯವನ್ನು ಅಂದು ಆನಂದ್‌ಸಿಂಗ್ ವಿರೋ ಧಿಸಿದ್ದರು. ಅಲ್ಲದೇ, ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಜಮೀನು ಪರಭಾರೆ ಮಾಡಲು ರಾಜ್ಯ ಬಿಜೆಪಿ ಸರ್ಕಾರ ನಿರ್ಣಯ ಕೈಗೊಳ್ಳುವ ಮೂಲಕ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಹಿನ್ನಡೆಯುಂಟು ಮಾಡಿತ್ತು. ಕೈಗೊಂಡಿದ್ದ ನಿರ್ಣಯಕ್ಕೂ ವಿರೋಧ ವ್ಯಕ್ತಪಡಿಸಿ ತಮ್ಮ ನಿಲುವಿಗೆ ಬದ್ಧವಿರುವುದಾಗಿ ತಿಳಿಸಿದ್ದರು.
ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡ ತಕ್ಷಣ ಅದೇ ಅಂತಿಮವಾಗಿ ಆದೇಶ ಹೊರಬೀಳಲ್ಲ. ಅಂತಿಮ ಆದೇಶ ಹೊರ ಬೀಳುವುದರೊಳಗೆ ಸಾಕಷ್ಟು ಸಮಯ ಬೇಕಾಗಲಿದೆ. ಸಚಿವ ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಮಾಹಿತಿ ಕೊರತೆಯಿಂದಾಗಿ ಜಿಂದಾಲ್ ಸಂಸ್ಥೆಗೆ 3667 ಎಕರೆ ಜಮೀನು ಪರಭಾರೆ ಮಾಡಲು ಸಮ್ಮತಿ ವ್ಯಕ್ತಪಡಿಸಿರಬಹುದು.
ಈ ಕುರಿತು ನಾನು ಸಹ ಒಮ್ಮೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮತ್ತೂಮ್ಮೆ ಚರ್ಚಿಸಿ ಜಮೀನು ಪರಭಾರೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಆಗುವ ಅನುಕೂಲ- ಅನಾನು ಕೂಲಗಳ ಬಗ್ಗೆಯೂ ಮನ ವರಿಕೆ ಮಾಡಿಕೊಡುವೆ ಎಂದಿದ್ದರು.
ಸಚಿವ ಆನಂದ್‌ಸಿಂಗ್ ಹೇಳಿದಂತೆ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್‌ಗೆ ಜಮೀನು ಪರಭಾರೆ ಮಾಡಲು ಒಪ್ಪಿಗೆ ಪಡೆದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಬಿಟ್ಟಿದ್ದು, ಜಿಂದಾಲ್ ಜಮೀನು ಪರಭಾರೆ ವಿಷಯದಲ್ಲಿ ಸಚಿವ ಆನಂದ್‌ಸಿಂಗ್ ಅವರಿಗೆ ಮತ್ತೂಂದು ಜಯ ಸಿಕ್ಕಂತಾಗಿದೆ.