ಬಳ್ಳಾರಿ: ಎಐಸಿಸಿ ವಕ್ತಾರ, ರಾಜ್ಯಸಭೆ ಸದಸ್ಯ ಡಾ| ಸೈಯದ್ ನಾಸೀರ್ ಹುಸೇನ್ ಅವರು ಪಾಲಿಕೆ ನೂತನ ಸದಸ್ಯರೊಂದಿಗೆ ನಗರದ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಮೈಕ್ ಮೂಲಕ ಸೋಂಕಿತರೊಂದಿಗೆ ಮಾತನಾಡಿ ಆತ್ಮಸ್ಥೈರ್ಯ ತುಂಬಿದರು.
ಬಳಿಕ ಮಾತನಾಡಿದ ಅವರು, ಮೇ 10ರಂದು ಜಿಲ್ಲಾಧಿಕಾರಿ ಕರೆಯಲಾಗಿದ್ದ ಸಭೆಯಲ್ಲಿ ಹಲವು ಕೋವಿಡ್ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದೇನೆ. ಜತೆಗೆ ಕೆಲವೊಂದು ಸಲಹೆಗಳನ್ನು ನೀಡಿದ್ದೇನೆ. ಕೋವಿಡ್ ಆಸ್ಪತ್ರೆಗಳಲ್ಲಿನ ಕುಂದುಕೊರತೆಗಳನ್ನು ನೇರವಾಗಿ ತಿಳಿದುಕೊಳ್ಳುವ ಸಲುವಾಗಿ ನಗರದ ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇವೆ ಎಂದರು.
ಕೋವಿಡ್ ಟ್ರಾಮಾ ಕೇರ್ ಸೆಂಟರ್, ವಿಮ್ಸ್ ಆಸ್ಪತ್ರೆ (ಡಿಸಿಹೆಚ್‌ಸಿ), ವಿಮ್ಸ್ (ಹಳೇ ಡೆಂಟಲ್ ಕಾಲೇಜು), ವಿಮ್ಸ್ (ಹೊಸ ಡೆಂಟರ್ ಕಾಲೇಜು), ಬಳ್ಳಾರಿ ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ್ದೇವೆ ಎಂದರು. ಕೋವಿಡ್ ಟ್ರಾಮಾಕೇರ್ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳು, ಡಿ-ಗ್ರೂಪ್ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿ, ಎನ್-95 ಮಾಸ್ಕ್ ಹಾಗೂ ಗ್ಲೌಸ್ ಗಳ ಕೊರತೆ ಇದ್ದು, ಸಮರ್ಪಕ ಸರಬರಾಜು ಮಾಡದಿರುವುದು ತಿಳಿದು ಬಂದಿದೆ.
ಸಿಬ್ಬಂದಿಗೆ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ವೇತನ ಪಾವತಿ ಆಗುತ್ತಿಲ್ಲ. 2-3 ತಿಂಗಳಿಗೊಮ್ಮೆ ಆಗುತ್ತಿದೆ. ನರ್ಸ್‌ಗಳು ನಿಗದಿಗಿಂತ ಕಡಿಮೆ ಕರ್ತವ್ಯಕ್ಕೆ ಹಾಜ ರಾಗುತ್ತಿದ್ದು ಉಳಿದವರು ಗೈರಾಗುತ್ತಿದ್ದಾರೆ. ಪಿಎಂ ಕೇರ್ನಿಂದ ಸರಬರಾಜಾದ ವೆಂಟಿಲೇಟರ್‌ಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ ಎಂದವರು ತಿಳಿಸಿದರು.
ಇನ್ನು ಜಿಲ್ಲಾಸ್ಪತ್ರೆ, ವಿಮ್ಸ್‌ನಲ್ಲಿ ರೋಗಿಗಳ ಅಗತ್ಯಕ್ಕೆ ತಕ್ಕಂತೆ ರೆಮ್‌ಡಿಸಿವಿಯರ್ ಔಷಧ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ನರ್ಸ್‌ಗಳ ಕೊರತೆಯಿದ್ದು, ಪ್ರತಿ ಪಾಳಿಯಲ್ಲಿ 4 ನರ್ಸ್‌ಗಳ ಅವಶ್ಯಕತೆ ಸೇರಿ ಇನ್ನಿತರೆ ಹಲವು ಕೊರತೆಗಳು ಕಂಡುಬಂದಿದ್ದು, ಜಿಲ್ಲಾಡಳಿತ ಕೂಡಲೇ ಗಮನಹರಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಲಸಿಕೆ ಹಾಕಿಸಿಕೊಳ್ಳಲು ಬಂದವರೊಂದಿಗೆ ಸ್ವಲ್ಪ ಹೊತ್ತು ಸಂವಾದ ನಡೆಸಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಲಸಿಕೆ ಪಡೆಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆಯೂ ಮಾಹಿತಿ ನೀಡಿದ್ದೇವೆ ಎಂದರು.
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹನುಮ ಕಿಶೋರ್, ಡಿಸಿಸಿ ಬ್ಲಾಕ್ ಅಧ್ಯಕ್ಷ ರವಿಕುಮಾರ್, ಮಹಾನಗರ ಪಾಲಿಕೆಗೆ ನೂತನ ಸದಸ್ಯರಾದ ಟಿ. ನಿಯಾಜ್ (ನಾಜು), ವಿವೇಕ್ (ವಿಕ್ಕಿ), ಆಸೀಫ್, ಮುಖಂಡ ಬಿ.ಆರ್.ಎಲ್ ಸೀನಾ ಇದ್ದರು.