ವಿಶ್ವನಾಥ ಹಳ್ಳಿಗುಡಿ
ಹೂವಿನಹಡಗಲಿ: ತಾಲೂಕಿನಲ್ಲಿ ಕೊರೊನಾ ಮಹಾಮಾರಿ ನಡುವೆಯೂ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದ್ದು ಕೃಷಿ ಹೊಂಡ, ಕೆರೆ ಹೂಳೆತ್ತುವಿಕೆ, ಕೆರೆ ಭರ್ತಿ ಹೀಗೆ ನರೇಗಾದಲ್ಲಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ.
ನರೇಗಾ ಯೋಜನೆಯ ಜಲಶಕ್ತಿ ಅಭಿಯಾನ ಯೋಜನೆಯಡಿಯಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳುವಿಕೆ, ಕಾಮಗಾರಿಯಲ್ಲಿ ಕೃಷಿ ಇಲಾಖೆಯಿಂದ ರೈತರ ಹೊಲಗಳಲ್ಲಿ ಬದು ನಿರ್ಮಾಣ, ಗೋಕಟ್ಟೆ, ಸಣ್ಣ ಸಣ್ಣ ಕೆರೆಗಳ ನಿರ್ಮಾಣ, ಕಲ್ಯಾಣಿಗಳ ಪುನಶ್ಚೇತನ ಕೆಲಸಗಳನ್ನು ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಮಾಡುತ್ತಿದ್ದು, ಅರಣ್ಯ ಇಲಾಖೆಯಿಂದ ಮಣ್ಣು ಮತ್ತು ನೀರು ಸಂಸ್ಕಾರ, ಕೃಷಿ ಇಲಾಖೆಯಿಂದ ಜಲಾಮೃತ ಯೋಜನೆಯಲ್ಲಿ ಕೃಷಿ ಹೊಂಡಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಕೆರೆ ಹೂಳೆತ್ತುವ ಕಾಮಗಾರಿ: ಪ್ರಸ್ತುತ ಯೋಜನೆಯಲ್ಲಿ ನಾಲಾ ಪುನಶ್ಚೇತನ ಕಾಮಗಾರಿಯಲ್ಲಿ ಏಪ್ರಿಲ್ ತಿಂಗಳಿಂದ ಮೂರು ತಿಂಗಳ ತನಕ ಅಂದರೆ ಜೂನ್ 2021ರ ತನಕ ಕೆರೆ ಹೂಳೆತ್ತುವ ಕಾಮಗಾರಿಯನ್ನು ಅಭಿಯಾನ ರೂಪದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇವುಗಳ ಸಮರ್ಪಕ ನಿರ್ವಹಣೆಗೆ ಸರ್ಕಾರ ದುಡಿಯೋಣ ಬಾ ರಾಯಭಾರಿ ಎನ್ನುವ ಮೂಲಕವಾಗಿ ಕೂಲಿ ಕೆಲಸ ನಿರ್ವಹಣೆ ಮಾಡಲು ರಾಯಭಾರಿ ನೇಮಕ ಮಾಡಿಕೊಂಡು ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒಗಳಿಗೆ ನರೇಗಾ ಕೆಲಸಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಈ ರಾಯಭಾರಿ ಕೆಲಸ ಮಾಡುತ್ತಾನೆ.
ರಾಯಭಾರಿ ನೇಮಕ 3 ತಿಂಗಳ ಮಟ್ಟಿಗಿದ್ದು ಪ್ರತಿದಿನ ರೂ. 350ಗಳ ವೇತನ ನೀಡಲಾಗುವುದು. ಹೆಚ್ಚು ಜಲಸಂರಕ್ಷಣೆ ಕಾಮಗಾರಿ ನಡೆಸುವುದು. ಕಾಮಗಾರಿಯ ಕಡತಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು ಹಾಗೂ ಕಾಯಕ ಬಂಧುಗಳಿಗೆ ಸಕಾಲಕ್ಕೆ ವೇತನ ದೊರಕುವಂತೆ ಮಾಡುವುದು ಈ ರಾಯಭಾರಿಯ ಕೆಲಸವಾಗಿರುತ್ತದೆ. ತಾಲೂಕಿನಲ್ಲಿ ಎಲ್ಲೆಲ್ಲಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ತಾಲೂಕಿನ ಪ್ರತಿ ಗ್ರಾಪಂಗೂ 10 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲು ಗುರಿ ವಿಧಿಸಲಾಗಿದ್ದು ಕೊಂಬಳಿ ಗ್ರಾಪಂ ಗುರಿಗೂ ಮೀರಿ ಅಂದರೆ ಈಗಾಗಲೇ ಸುಮಾರು 22 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿ ಉತ್ತಮ ಸಾಧನೆ ಮಾಡಿದೆ. ತಾಲೂಕಿನ 26 ಗ್ರಾಪಂಗೆ 50 ಬದು ನಿರ್ಮಾಣದ ಗುರಿ ನೀಡಲಾಗಿದ್ದು ಸೋಗಿ ಗ್ರಾಪಂ ವ್ಯಾಪ್ತಿಯಲ್ಲಿ ಗುರಿ ಮೀರಿ ಸಾಧನೆ ಮಾಡಲಾಗಿದೆ.
ಅಂದರೆ ಸೋಗಿ ಗ್ರಾಪಂ ಒಂದರಲ್ಲಿಯೇ ಸುಮಾರು 148 ಬದು ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನೂ ನರೇಗಾ ಯೋಜನೆಯಲ್ಲಿ ತಾಲೂಕಿನಲ್ಲಿ ಕೆರೆ ಅಭಿವೃದ್ಧಿ ಯೋಜನೆಗಾಗಿ 3 ಕೆರೆಗಳ ಗುರಿ ನೀಡಲಾಗಿದ್ದು, ಆದರೆ ತಾಲೂಕಿನಲ್ಲಿ ಗುಜೂರು, ಚಿಕ್ಕಕೊಳಚಿ, ಸೋವೇನಹಳ್ಳಿ, ಹ್ಯಾರಡ, ಕೆ.ಅಯ್ಯನಹಳ್ಳಿ ಗ್ರಾಮ ಒಳಗೊಂಡಂತೆ ಒಟ್ಟು 5 ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಕಲ್ಯಾಣಿ ಪುನಶ್ಚೇತನ ಕಾಮಗಾರಿ: ನಂದಿಹಳ್ಳಿ ಗ್ರಾಮದಲ್ಲಿ ಪುರಾತನ ಕಲ್ಯಾಣಿ ಪುನಶ್ಚೇತನ ಕಾಮಗಾರಿ ಪೂರ್ಣಗೊಂಡಿದ್ದು, ತಳಕಲ್, ಕೆಂಚಂನಹಳ್ಳಿ, ಶಿವಲಿಂಗನಹಳ್ಳಿ, ಇಟಗಿ, ಗ್ರಾಮಗಳಲ್ಲಿ ಕಲ್ಯಾಣಿ ಪುನಶ್ಚೇತನ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ ನರೇಗಾ ಕಾಮಗಾರಿಯಲ್ಲಿಯೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಸಿ ನೆಡುವ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು ಜೂನ್, ಜುಲೈ ತಿಂಗಳ ಅಂತ್ಯದಲ್ಲಿ ಸುಮಾರು 1 ಲಕ್ಷ 30 ಸಾವಿರ ಸಸಿಗಳನ್ನು ನೆಡಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯು.ಎಚ್. ಸೋಮಶೇಖರ್ ತಿಳಿಸಿದರು.
ಕಾಯಕ ತಂಡ: ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಕೋವಿಡ್ ನಿಯಮ ಅನುಸರಿಸಿ ತಾಲೂಕಿನಲ್ಲಿ ನರೇಗಾ ಕಾಮಗಾರಿ ನೀಡಲಾಗುತ್ತಿದ್ದು ಅದಕ್ಕಾಗಿ ತಂಡ ಕಾಯಕ ರಚಿಸಿಕೊಂಡು ಪ್ರತಿ ತಂಡದಲ್ಲಿಯೂ 25-30 ಜನ ಕಾಯಕ ಬಂಧುಗಳು ನಿಯಮ ಪಾಲನೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.