Advertisement

ಕೊರೊನಾ ಕರ್ಫ್ಯೂ; ಬಳ್ಳಾರಿ ಸಂಪೂರ್ಣ ಸ್ತಬ್ಧ

09:34 PM May 11, 2021 | Team Udayavani |

ಬಳ್ಳಾರಿ: ರಾಜ್ಯದಲ್ಲಿ ಕೋವಿಡ್‌ ಸೋಂಕು ದಿನೇದಿನೆ ವ್ಯಾಪಕವಾಗಿ ಹರಡುತ್ತಿದೆ. ಸೋಂಕಿನಿಂದ ಸಾವು-ನೋವುಗಳು ಹೆಚ್ಚುತ್ತಿದ್ದು, ನಿಯಂತ್ರಿಸಲು ಮುಂದಾಗಿರುವ ರಾಜ್ಯ ಸರ್ಕಾರ ಮೇ 10ರಂದು ಸೋಮವಾರದಿಂದ 24ರ ವರೆಗೆ ವಿ ಧಿಸಿರುವ ಕಠಿಣ ಕೊರೊನಾ ಕರ್ಫ್ಯೂ ಗಣಿನಾಡು ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲೂ ಸಂಪೂರ್ಣ ಸ್ತಬ್ಧಗೊಂಡಿತ್ತು. ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನಿಗದಿತ ಅವಧಿಯನ್ನು ಹೊರತುಪಡಿಸಿ ನಗರದ ಪ್ರಮುಖ ರಸ್ತೆಗಳಲ್ಲಿರುವ ಎಲ್ಲ ವಾಣಿಜ್ಯ ಮಳಿಗೆಗಳು ಸಂಪೂರ್ಣ ಬಂದ್‌ ಆಗಿದ್ದವು. ಆಟೋ, ಪ್ರಯಾಣಿಕ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

Advertisement

ಬೆಳಗ್ಗೆ 10 ಗಂಟೆ ನಂತರ ನಗರದ ಬಹುತೇಕ ರಸ್ತೆಗಳು ಜನಜಂಗುಳಿ, ವಾಹನ ದಟ್ಟಣೆಯಿಲ್ಲದೇ ಬಿಕೋ ಎನ್ನುತ್ತಿದ್ದವು. ಔಷಧ ಮಳಿಗೆಗಳು, ಕ್ಲೀನಿಕ್‌, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ಬೇರೆ ಬೇರೆ ಊರುಗಳಿಂದ ಬಂದವರು, ತಳ್ಳುಗಾಡಿಗಳಲ್ಲಿ ಹಣ್ಣು ಮಾರುವವರು ಅಲ್ಲಲ್ಲಿ ಕಂಡುಬಂದರು.

ಪೊಲೀಸರು ಬಂದಾಗ ಮುಖ್ಯ ರಸ್ತೆಗಳಿಂದ ಮರೆಯಾಗುವ ಹಣ್ಣು ಮಾರುವವರು, ಪಕ್ಕದ ಓಣಿಗಳಲ್ಲಿ ಬಂಡಿಗಳನ್ನು ನಿಲ್ಲಿಸಿ ಹಣ್ಣುಗಳ ಮಾರಾಟದಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಗೆ ರಸ್ತೆಗಿಳಿದ ಪೊಲೀಸರು ನಗರದ ಗಡಗಿ ಚನ್ನಪ್ಪ ವೃತ್ತ, ಬ್ರೂಸ್‌ಪೇಟೆ ವೃತ್ತ, ಮೋತಿ ವೃತ್ತ, ಮೀನಾಕ್ಷಿ ವೃತ್ತ, ಸಂಗಮ್‌ ವೃತ್ತ ಸೇರಿ ಬಹುತೇಕ ವೃತ್ತಗಳಲ್ಲಿ ಕಟ್ಟಿಗೆಗಳಿಂದ ಬ್ಯಾರಿಕೇಡ್‌ ನಿರ್ಮಿಸಿ ಯಾವುದೇ ವಾಹನಗಳು ಹೋಗದಂತೆ ಲಾಕ್‌ ಮಾಡಿದ್ದಾರೆ.

ಅಲ್ಲೊಂದು ಇಲ್ಲೊಂದು ವಾಹನಗಳು ಕಂಡುಬಂದವು. ವಿನಾಕಾರಣ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು.

ನೂರಾರು ವಾಹನಗಳು ಸೀಜ್‌: ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡಿ ಕರ್ಫ್ಯೂ ವಿ ಧಿಸಿದ್ದರೂ ಜನರು ಮಾತ್ರ ಮನೆಯಿಂದ ಹೊರಬರುವುದನ್ನು ನಿಲ್ಲಿಸಲಿಲ್ಲ. ಬಹುತೇಕ ವೃತ್ತಗಳಲ್ಲಿ ಪೊಲೀಸರು ತಡೆಹಿಡಿದು ಗದರಿಸಿದರೂ, ಹಳೆಯ ಆಸ್ಪತ್ರೆ ಚೀಟಿ ಹಿಡಿದು ಆಸ್ಪತ್ರೆಗೆ, ಔಷಧ ಮಳಿಗೆಗೆ, ಸ್ಕಾ ನಿಂಗ್‌ ಸೆಂಟರ್‌ಗೆ ಎಂಬ ನೆಪಗಳನ್ನು ಹೇಳುವುದನ್ನು ಬಿಟ್ಟಿಲ್ಲ. ಈ ಎಲ್ಲ ನೆಪಗಳನ್ನು ಕೇಳುತ್ತಿದ್ದ ಪೊಲೀಸರು ಕೆಲವೊಬ್ಬರಿಗೆ ಗದರಿಸಿ ಬಿಟ್ಟರೆ, ಇನ್ನು ಕೆಲವರ ವಾಹನಗಳನ್ನು ಸೀಜ್‌ ಮಾಡಿದ್ದಾರೆ.

Advertisement

ಕೊರೊನಾ ಕರ್ಫ್ಯೂ ಜಾರಿಯಾದ ಮೊದಲ ದಿನವೇ ಬಳ್ಳಾರಿ, ಹೊಸಪೇಟೆ ಸೇರಿ ಜಿಲ್ಲೆಯಾದ್ಯಂತ 900ಕ್ಕೂ ಹೆಚ್ಚು ವಾಹನಗಳನ್ನು ಸೀಜ್‌ ಮಾಡಲಾಗಿದೆ ಎಂದು ಎಸ್‌ಪಿ ಸೈದುಲು ಅಡಾವತ್‌ ತಿಳಿಸಿದ್ದಾರೆ.

ನಕಲಿ ಪೊಲೀಸ್‌ಗೆ ಕ್ಲಾಸ್‌: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ವಾಹನಗಳನ್ನು ತಡೆಯುತ್ತಿದ್ದ ಪೊಲೀಸರಿಗೆ ಪೊಲೀಸ್‌ ಎಂದು ಬರೆಸಿಕೊಂಡಿದ್ದ ಕಾರೊಂದು ಕಂಡುಬಂದಿವೆ. ಈ ವೇಳೆ ವೃತ್ತದಲ್ಲಿದ್ದ ಎಎಸ್‌ಪಿ ಬಿ.ಎನ್‌.ಲಾವಣ್ಯ ಈ ಕಾರನ್ನು ಗಮನಿಸಿ, ವಿಚಾರಿಸಿದಾಗ ಕಾರಿನವರು ನಕಲು ಪೊಲೀಸ್‌ ಎಂದು ತಿಳಿದು ಬಂದಿದೆ. ಪೊಲೀಸ್‌ ಎಂದು ಬರೆಸಿಕೊಳ್ಳಲು ನಿಮಗೇನು ಹಕ್ಕಿದೆ. ಕೂಡಲೇ ಅದನ್ನು ಕಿತ್ತು ಬಿಸಾಕು ಎಂದು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next