ಕಂಪ್ಲಿ: ಸೋಮವಾರದಿಂದ ಲಾಕ್‌ಡೌನ್ ಸ್ಥಿತಿಗತಿಗಳು ಬದಲಾಗುವು ದರಿಂದ ವಾರದ ಕೊನೆಯ ದಿನವಾದ ಇಂದು ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ಮುಗಿಬಿದ್ದರು.
ಏ.27ರಿಂದ ಕೊರೊನಾ ಕರ್ಫ್ಯೂ ಇದ್ದರೂ ಸಹಿತ ಅದು ಅಷ್ಟಾಗಿ ಪರಿಣಾಮ ಬಿರದೇ ಕೊರೊನಾ ಹಿಡಿತಕ್ಕೆ ಸಿಗದೇ ಇರುವುದರಿಂದ ಮೇ 10ರಿಂದ ಕೊರೊನಾ ಕರ್ಫ್ಯೂ ನೀತಿಗಳನ್ನು ಸರ್ಕಾರ ಬದಲಿಸಿದ್ದು ಇದು ಪಟ್ಟಣವೂ ಸೇರಿದಂತೆ ತಾಲೂಕಿನಲ್ಲಿ ಜಾರಿಯಾಗುವ ನಿಟ್ಟಿನಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಮರೆತು ಖರೀದಿಯಲ್ಲಿ ತೊಡಗಿದ್ದರು.
ಸೋಮವಾರದಿಂದ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಕಾಲಾವಕಾಶವಿದ್ದು, ನಂತರ ಯಾವುದೇ ಕಾರಣಕ್ಕೂ ಸಾರ್ವಜನಿಕರ, ವಾಹನಗಳ ಸಂಚಾರ ಅವಕಾಶವಿರುವುದಿಲ್ಲ. ಒಂದುವೇಳೆ ಅನಗತ್ಯವಾಗಿ ಸಂಚರಿಸಿದರೆ ಪೊಲೀಸರು ಲಾಠಿ ರುಚಿ ಜೊತೆಗೆ ದಂಡದ ಬಿಸಿಯನ್ನು ಮುಟ್ಟಿಸಲಿದ್ದಾರೆ.
ಭಾನುವಾರ ಪಟ್ಟಣದ ಬಹುತೇಕ ಬೀದಿಗಳು ಸಾರ್ವಜನಿಕರಿಂದ ತುಂಬಿ ತುಳುಕುತ್ತಿತ್ತು. ಈ ಮಧ್ಯೆ ಪಟ್ಟಣದ ಸರ್ವಪಕ್ಷಗಳ ಮುಖಂಡರು ಸಭೆ ಸೇರಿ ಪಟ್ಟಣದ ಎಲ್ಲ ದ್ವಾರಗಳನ್ನು ಬಂದ್ ಮಾಡಿ ಪಟ್ಟಣದಿಂದ ಹೊರಗೆ ಹೋಗಲು, ಪಟ್ಟಣದ ಒಳಗೆ ಬರಲು ಸ್ವಯಂ ನಿರ್ಬಂಧಗಳನ್ನು ಹಾಕಿಕೊಳ್ಳಲು ತೀರ್ಮಾನಿಸಿದ್ದಾರೆ.
ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಮೇ 24ರವರೆಗೂ ಸ್ವಯಂ ನಿರ್ಬಂಧಕ್ಕೆ ಬಂದಿದ್ದು, ಪೊಲೀಸರೊಂದಿಗೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲು ಒಮ್ಮತ ತೀರ್ಮಾನ ಮಾಡಿದ್ದಾರೆ.