Advertisement

ಹಳೇ ದರದಲ್ಲಿ ರಸಗೊಬ್ಬರ ವಿತರಿಸಲು ಆಗ್ರಹ

10:10 PM May 04, 2021 | Team Udayavani |

ಹೊಸಪೇಟೆ: ಹಳೇ ದರದಲ್ಲಿ ರಸ ಗೊಬ್ಬರವನ್ನು ವಿತರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಜಯನಗರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ನಾಗರಿಕ ವೇದಿಕೆ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು.

Advertisement

ಮುಖಂಡರಾದ ವೈ. ಯಮುನೇಶ್‌ ಮಾತನಾಡಿ, ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರ್ನಾಟಕದಲ್ಲಿ ಉತ್ತಮ ಮುಂಗಾರು ಮಳೆ ಸುರಿಯಲಿದ್ದು ಸಹಜವಾಗಿಯೆ ರೈತಾಪಿ ವರ್ಗದಲ್ಲಿ ಹರ್ಷ ಮೂಡಿದೆ. ಈಗಾಗಲೇ ಮುಂಗಾರು ಬಿತ್ತನೆಯ ಪೂರ್ವಭಾವಿ ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗಿರುವಾಗ ರಸಗೊಬ್ಬರಗಳ  ದಿಢೀರ್‌ ಬೆಲೆ ಏರಿಕೆಯಿಂದ ಕೃಷಿಕರಿಗೆ ಶಾಕ್‌ ನೀಡಿದಂತಾಗಿದೆ. ಕೆಲ ದಿನಗಳ ಹಿಂದೆ ರಾಜ್ಯದ ಕೃಷಿ ಇಲಾಖೆಯ ಆಯುಕ್ತರು ಹೇಳಿಕೆ ನೀಡಿ ಕಳೆದ ಸಾಲಿನ 11.55ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಗೋದಾಮಿನಲ್ಲಿ ದಾಸ್ತಾನಿದ್ದು, ಪ್ರಾಥಮಿಕ ಕೃಷಿ ಸಹಕಾರ ಸಂಘ ಹಾಗೂ ಖಾಸಗಿ ಮಾರಾಟಗಾರರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 11000 ರಸಗೊಬ್ಬರ ಮಳಿಗೆಗಳ ಮೂಲಕ ಹಳೇ ದರದಲ್ಲಿ ರಸಗೊಬ್ಬರ ಪೂರೈಕೆಯಾಗಲಿದ್ದು ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದರು.

ಆದರೆ ಇದೀಗ ವಿಜಯನಗರ ಜಿಲ್ಲೆ ಮತ್ತಿತರ ಕಡೆ ಹೊಸ ದರದಲ್ಲೇ ಗೊಬ್ಬರ ಮಾರಲಾಗುತ್ತಿದೆ. ಹಳೇ ದರದಲ್ಲಿ 50 ಕೆಜಿ ಚೀಲಕ್ಕೆ 1300 ರೂ ಗಳಿದ್ದ ಇಪ್ಕೋ ಡಿಎಪಿ ಗೊಬ್ಬರ ಹೊಸದರದಲ್ಲಿ 1900 ರೂಗಳಿದ್ದರೆ, 1350 ರೂಪಾಯಿಗಳಿದ್ದ ಮಂಗಳ ಡಿಎಪಿ 1700 ರೂ ಹೆಚ್ಚಿಸಲಾಗಿದೆ. ಅದೇ ರೀತಿ ಪೊಟಾಷ್‌, ಎಂ.ಓ.ಪಿ ಹಾಗೂ ವಿವಿಧ ಗ್ರೇಡಿನ ಕಾಂಪ್ಲೆಕ್ಸ್‌ ಗೊಬ್ಬರಗಳ ಬೆಲೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರ ಹಳೇ ದರದಲ್ಲಿ ರಸಗೊಬ್ಬರ ಪೂರೈಕೆಗೆ ತುರ್ತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಸಣ್ಣ ಮಾರೆಪ್ಪ, ಆಂಜನೇಯಲು, ಸುಭಾಷ್‌ ಚಂದ್ರ, ಕಂಪ್ಲಿ ನಾಗರಾಜ, ಎಚ್‌.ತಿಪ್ಪೇಸ್ವಾಮಿ, ಆರ್‌. ರಮೇಶ್‌ ಗೌಡ, ಕೆ.ಸುರೇಶ, ಜೆ.ರಾಘವೇಂದ್ರ, ಷೇಕ್‌ ಮೆಹಬೂಬ್‌ ಭಾಷಾ, ಶ್ರೀಧರ ಹಾಗೂ ಪ್ರಕಾಶ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next