ಹೊಸಪೇಟೆ: ಐತಿಹಾಸಿಕ ಹಂಪಿಗೆ ಆಗಮಿಸುವ ಪ್ರವಾಸಿಗರ ಆಗಮನಕ್ಕೆ ಕಡಿವಾಣ ಬಿದ್ದ ಬೆನ್ನಲ್ಲಿಯೇ ಹಂಪಿಯಲ್ಲಿ ಕೋತಿಗಳಿಗೆ ಹಸಿವಿನ ಸಮಸ್ಯೆ ಎದುರಾಗಿದೆ. ಹಂಪಿ ಸ್ಮಾರಕ ವೀಕ್ಷಣೆಗೆ ನಿರ್ಬಂಧ ಹೇರಿರುವ ನಡುವೆ ವಿರೂಪಾಕ್ಷೇಶ್ವರ ದೇವಾಯಲಕ್ಕೆ ಭಕ್ತರ ಪ್ರವೇಶವನ್ನು ಕೂಡ ನಿಷೇಧಿಸಿದೆ.
ಪ್ರವಾಸಿಗರಿಲ್ಲದೇ ಹಂಪಿ ಬಣ ಗುಡುತ್ತಿದೆ. ಹಂಪಿ ಬರುವಂತ ಪ್ರವಾಸಿಗರಿಂದ ನೀಡುವ ಹಣ್ಣು, ಆಹಾರದಿಂದ ತಮ್ಮ ಹಸಿವು ನೀಗಿಸಿಕೊಳ್ಳುತ್ತಿದ್ದ ಕೋತಿಗಳಿಗೆ ಇದೀಗ ಹಸಿವಿನ ಸಮಸ್ಯೆ ಎದುರಾಗಿದೆ. ಪ್ರವಾಸಿಗರ ಬೆನ್ನು ಬೀಳುತ್ತಿದ್ದ ಕೋತಿಗಳಿಗೆ ಹಣ್ಣು-ಆಹಾರ ಸೇರಿದಂತೆ ನಾನಾ ತಿಂಡಿ-ತಿನಿಸುಗಳು ಹೇರಳವಾಗಿ ಸಿಗುತ್ತಿತ್ತು. ಆದರೆ ಪ್ರವಾಸಿಗರ ಆಗಮನವಿಲ್ಲದೇ ಅವುಗಳಿಗೆ ಆಹಾರ ಸಿಗುವುದು ದುಸ್ತರವಾಗಿದೆ. ಹಸಿವಿನಿಂದ ಬಳಲುತ್ತಿರುವ ಕೋತಿಗಳು ಅಲ್ಲಿಲ್ಲಿ ಅಲೆದಾಡುತ್ತಿವೆ. ಕೊರೊನಾ ಸಂಕಷ್ಟ ಕೇವಲ ಮಾನವರಿಗೆ ಮಾತ್ರ ಎದುರಾಗಿಲ್ಲ. ಅದು ಪ್ರಾಣಿಗಳೂ ಎದುರಾಗಿದೆ ಎಂಬುದಕ್ಕೆ ಇದು ತಾಜಾ ಉದಾರಣೆಯಾಗಿದೆ.
ಕಳೆದ ಲಾಕ್‌ಡೌನ್‌ನಲ್ಲಿಯೂ ಕೋತಿಗಳಿಗೆ ಆಹಾರ: ಕಳೆದ ಲಾಕ್‌ಡೌನ್ ಸಮಯದಲ್ಲಿಯೂ ಸ್ಥಳೀಯರು ಸೇರಿದಂತೆ ಪ್ರವಾಸಿ ಮಾರ್ಗದರ್ಶಕರು, ಹೋಮ್ ಗಾರ್ಡ್ ಸಿಬ್ಬಂದಿ, ಸಂಘ-ಸಂಸ್ಥೆ ಪದಾಧಿಕಾರಿಗಳು, ಕೋತಿಗಳಿಗೆ ಆಹಾರ-ನೀರು ನೀಡುವ ಮೂಲಕ ಅವುಗಳ ಹಸಿವು ನೀಗಿಸಿದ್ದರು. ಕಳೆದ ವರ್ಷದಂತೆ ಕೊರೊನಾ ಸಂಕಷ್ಠ ಮುಗಿಯುವವರಗೆ ಕೋತಿಗಳಿಗೆ ಸಾರ್ವಜನಿಕರು ಆಹಾರ-ನೀರು ಒದಗಿಸಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.
ಮಾನವೀಯತೆ ಮೆರೆದ ಪ್ರವಾಸಿ ಮಿತ್ರರು: ಐತಿಹಾಸಿಕ ಹಂಪಿಯಲ್ಲಿ ಗೃಹರಕ್ಷಕ (ಪ್ರವಾಸಿ ಮಿತ್ರ) ದಳದ ಸಿಬ್ಬಂದಿಗಳು ಶನಿವಾರ ಕೋತಿಗಳಿಗೆ ಆಹಾರ-ನೀರು ನೀಡುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ನೀರು ಹಣ್ಣು-ನೀರಿನಿಂದ ತಮ್ಮ ಹಸಿವು ನೀಗಿಸಿಕೊಳ್ಳುತ್ತಿದ್ದ ಕೋತಿಗಳು ಹಸಿವಿನಿಂದ ಬಳಲುತ್ತಿವೆ. ಕೋತಿಗಳ ಹಸಿವು ನೀಗಿಸಲು ಮುಂದಾಗಿರುವ ಹೋಮ್ ಗಾರ್ಡ್ ಸಿಬ್ಬಂದಿಗಳು, ಹಂಪಿ ವಿರೂಪಾಕ್ಷೇಶ್ವರ ದೇವಾಲಯ, ಉದ್ದಾನ ವೀರಭದ್ರೇಶ್ವರ, ವಿಜಯ ವಿಠಲ, ನದಿ ತೀರ, ಕೋದಂಡರಾಮ ದೇವಾಲಯದ ಹತ್ತಿರ ಬೀಡು ಬಿಟ್ಟಿರುವ ಕೋತಿಗಳಿಗೆ ಹಣ್ಣು-ನೀರು ನೀಡಿ ಮಾನವೀಯತೆ ಮೆರೆದರು. ಪ್ರವಾಸಿ ಮಿತ್ರ ಸಿಬ್ಬಂದಿಗಳಾದ ಎಚ್.ಸಿದ್ದಪ್ಪ, ಪಿ.ಬಾಷಾಸಾಬ್, ಬಿ.ಗಂಗಾಧರ, ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಶ್ರೀಧರ ಇತರರು ಈ ಕಾರ್ಯದಲ್ಲಿ ಕೈಜೋಡಿಸಿದರು.