ಹೂವಿನಹಡಗಲಿ: ಮೈಲಾರ ಗ್ರಾಮದಲ್ಲಿ ಫೆ. 19ರಿಂದ ಮಾರ್ಚ್ 2ರವರೆಗೆ ಮೈಲಾರಲಿಂಗ ಸ್ವಾಮಿ ಜಾತ್ರೆ ನಡೆಯುತ್ತಿದ್ದು ಈ ಬಾರಿ ಹೊರಗಿನ
ಭಕ್ತರಿಗೆ ನಿಷೇಧವಿರುವುದರಿಂದ ಸ್ಥಳೀಯರಿಗೆ ಮಾತ್ರ ಸೀಮಿತಗೊಂಡಂತಾಗಿದೆ.
ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಮೈಲಾರ ಜಾತ್ರೆಯನ್ನು ಈ ಭಾರಿ ಯಥಾರೀತಿಯಾಗಿ ಆಚರಣೆ ಮಾಡದೇ
ಮೈಲಾರದ ಭಕ್ತರು ಹಾಗೂ ಸ್ಥಳೀಯರು ಒಳಗೊಂಡಂತೆ ಜಾತ್ರೆಯ ಧಾರ್ಮಿಕ ಕಾರ್ಯಗಳನ್ನು ಸರಳವಾಗಿ ಆಚರಣೆ ಮಾಡಲು ಅನುಮತಿ ನೀಡಿದೆ.
ಜಿಲ್ಲಾಧಿಕಾರಿ ಪವನ್‌ಕುಮಾರ ಮಾಲಪಾಟಿ, ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಧರ್ಮಾಧಿಕಾರಿ ಶ್ರೀ ವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ಸಭೆ ಕರೆದು ಜಾತ್ರೆಯನ್ನು ಆತ್ಯಂತ ಸರಳವಾಗಿ ಆಚರಣೆ ಮಾಡಲು ಅಧಿಕಾರಿಗಳಿಗೆ ನಿರ್ದೆಶನ ನೀಡಿದ್ದಾರೆ. ಫೆ. 15ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಮೂಲಕ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.
ಹೊರಗಿನ ಭಕ್ತರನ್ನು ತಡೆಯಲು ಚೆಕ್‌ಪೋಸ್ಟ್ ನಿರ್ಮಿಸಲಾಗುತ್ತಿದೆ. ಅಂಗಡಿ ಇಡಲು ಪರವಾನಗಿ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಶ್ರೀಮೈಲಾರಲಿಂಗೇಶ್ವರ ಜಾತ್ರೆಗೆ ಆಗಮಿಸಲಿದ್ದ ಲಕ್ಷಾಂತರ ಭಕ್ತರಿಗೆ ನಿರಾಶೆಯಾಗಿದೆ. ಅಲ್ಲದ ಕೊರೊನಾದಿಂದಾಗಿ ಮೈಲಾರಲಿಂಗೇಶ್ವರ ಭಕ್ತರ ಧಾರ್ಮಿಕ ಭಾವನೆಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ. 1904ರಲ್ಲಿ ರಾಜ್ಯದಲ್ಲಿ ಪ್ಲೇಗ್ ಮಹಾಮಾರಿ ಹರಡಿದ್ದಾಗ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡುವ ಮೂಲಕವಾಗಿ ಹೊರಗಿನ ಭಕ್ತರಿಗೆ ಪ್ರವೇಶ ವನ್ನು ನಿಷೇಧಿಸಲಾಗಿತ್ತು.
ಜಿಲ್ಲಾಧಿಕಾರಿಗಳ ಆದೇಶದಂತೆ ಹೊರಗಿನ ಭಕ್ತರಿಗೆ ಪ್ರವೇಶ ನಿರಾಕರಿಸಿ ಸರಳವಾಗಿ ಧಾರ್ಮಿಕ ವಿಧಿವಿಧಾನಗಳನ್ನು ಆಚರಣೆ ಮಾಡುವುದು ಸೂಕ್ತವಾಗಿದೆ. ಪಕ್ಕದ ಆಂಧ್ರಪ್ರದೇಶ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಂದಲೂ ಭಕ್ತರು ಈ ಜಾತ್ರೆಗೆ ಆಗಮಿಸುವುದರಿಂದಾಗಿ ಜನತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅವಕಾಶವಿರುತ್ತದೆ. ಕಾರಣ ಜಿಲ್ಲಾಡಳಿತ ಕ್ರಮ ಸೂಕ್ತವಾಗಿದೆ.
–ವೆಂಕಪ್ಪಯ್ಯ ಒಡೆಯರ್,
ವಂಶ ಪಾರಂಪರ್ಯ ಧರ್ಮಾಧಿಕಾರಿ
*ವಿಶ್ವನಾಥ ಹಳ್ಳಿಗುಡಿ