ಬಳ್ಳಾರಿ: ಹದಿಮೂರು ವರ್ಷದ ಬಳಿಕ ಜನಾರ್ದನ ರೆಡ್ಡಿ ಅವರು ಗುರುವಾರ(ಅ3 )ತವರು ಬಳ್ಳಾರಿಗೆ ಅದ್ದೂರಿ ಪ್ರವೇಶ ಮಾಡಿ ಗಮನಸೆಳೆದಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದ್ದು, ರಾಜಕೀಯ ವಿರೋಧಿಗಳಿಗೆ ದೊಡ್ಡ ಮಟ್ಟದ ಪರಿಣಾಮ ತೋರಿಸುವ ನಿಟ್ಟಿನಲ್ಲಿ ಭರ್ಜರಿ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಜೆಸಿಬಿಯಿಂದ ಬೃಹತ್ ಹಾರ ಹಾಕಿ, ಪಟಾಕಿ ಸಿಡಿಸಿ ಸ್ವಾಗತಿಸಿದರು.
ಮಾರ್ಗ ಮಧ್ಯೆ ನಗರ ಹೊರವಲಯದ ಅಲ್ಲೀಪುರ ಮಠದಿಂದಲೇ ದೊಡ್ಡ ಮೆರವಣಿಗೆ ನಡೆಸಲಾಯಿತು. ಹೂಮಳೆ ಸುರಿಸಿ ಅಲ್ಲಿಂದಲೇ ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಜನಾರ್ದನ ರೆಡ್ಡಿ ಬರುವ ಮಾರ್ಗ ದಲ್ಲೆಲ್ಲ ಹೂವಿನ ಮಳೆ ಸುರಿಸಲಾಯಿತು.
ಬ್ಯಾಂಡ್, ಗೊರವ ಕುಣಿತ, ತಮಟೆ ವಾದ್ಯ, ಸುಮಂಗಲಿಯರ ಆರತಿ, ಹತ್ತಾರು ಕಲಾ ತಂಡಗಳಿಂದ ಸ್ವಾಗತ ಮಾಡಲಾಯಿತು. ಅಲ್ಲಿಪುರ ಮಠದಲ್ಲಿ ಪೂಜೆ ಮೆರವಣಿಗೆ ಬಳಿಕ ದುರ್ಗಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಜನಾರ್ದನ ರೆಡ್ಡಿ ಮನೆಗೆ ಪ್ರವೇಶಿಸಲಿದ್ದಾರೆ.
ಅಕ್ರಮ ಗಣಿಗಾರಿಕೆಯ ಪ್ರಮುಖ ಆರೋಪಿಯಾಗಿದ್ದ ಜನಾರ್ದನ ರೆಡ್ಡಿಯವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಸೆ.5 ರಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಪರಿಣಾಮ ಆಂಧ್ರದ ಚರ್ಲಪಲ್ಲಿ ಜೈಲು ಸೇರಿದ್ದರು.ಬಂಧನದ ಬಳಿಕ ನಡೆದ ವಿಚಾರಣೆಯಲ್ಲಿ ಜನಾರ್ದನ ರೆಡ್ಡಿ ಪ್ರಭಾವಿಯಾಗಿದ್ದು ಸಾಕ್ಷಿ ನಾಶ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ ಪ್ರದೇಶಗಳಾದ ಬಳ್ಳಾರಿ, ಅನಂತಪುರ ಮತ್ತು ಕರ್ನೂಲು ಜಿಲ್ಲೆ ಪ್ರವೇಶ ನಿಷೇಧ ಹೇರಲಾಗಿತ್ತು.ಹೀಗಾಗಿ 13 ವರ್ಷಗಳಿಂದ ಜನಾರ್ದನ ರೆಡ್ಡಿ ಬಳ್ಳಾರಿಯಿಂದ ದೂರವಿದ್ದರು. ಮಗಳ ಮದುವೆ, ಮೊಮ್ಮೊಗಳ ನಾಮಕರಣ ಸೇರಿದಂತೆ ಇತರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾಲ್ಕೈದು ಬಾರಿ ಬಳ್ಳಾರಿಗೆ ಬಂದಿದ್ದರು.ಈಗ ಶಾಶ್ವತವಾಗಿ ಬಳ್ಳಾರಿಗೆ ಬರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.