ಭಾಲ್ಕಿ: ಪಟ್ಟಣದ ಪುರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಪುರಸಭೆ ಗದ್ದುಗೆಯನ್ನು ಪುನಃ ಮರಳಿ ಪಡೆದಿದೆ. ಕಳೆದ ಚುನಾವಣೆಯಲ್ಲಿ ಪುರಸಭೆಯ 23 ವಾಡ್‌ಗಳಲ್ಲಿ 17 ವಾರ್ಡ್‌ನಲ್ಲಿ ಕಾಂಗ್ರೆಸ್ ಜಯಗಳಿಸಿ ಬಹುಮತದೊಂದಿಗೆ ಐದು ವರ್ಷಗಳ ಕಾಲ ಅಧಿಕಾರ ನಡೆಸಿತ್ತು.
ಜನಸಂಖ್ಯೆ ಆಧಾರದ ಮೇಲೆ ಸದ್ಯ 27 ವಾರ್ಡ್ ಗಳಾಗಿದ್ದು, ಇವುಗಳಲ್ಲಿ 18 ಸ್ಥಾನಗಳನ್ನು ಗಳಿಸಿ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿದೆ.
ಕಳೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಕೆಜೆಪಿಗಳ ಮಧ್ಯ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಇವುಗಳಲ್ಲಿಯೂ ಬಿಜೆಪಿ ಮತ್ತು ಕೆಜೆಪಿಗಳನ್ನು ಮಣಿಸಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದಿತ್ತು.
ಪ್ರಸ್ತುತ ನಡೆದ ಚುನಾವಣೆಯಲ್ಲಿಯೂ ಪುರಸಭೆ ಚುನಾವಣೆಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಇಲ್ಲಿ ಕೆಜೆಪಿಯ ಸ್ಥಾನವನ್ನು ಜೆಡಿಎಸ್ ಪಕ್ಷ ಪಡೆದು ವ್ಯಾಪಕ ಸ್ಪರ್ಧೆ ನಡೆಸಿತ್ತು. ಕೆಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮಧ್ಯದಲ್ಲಿಯೇ ನೇರ ಹಣಾ ಹಣಿ ಏರ್ಪಟ್ಟಿತ್ತು. ಇವೆಲ್ಲದರ ಮಧ್ಯದಲ್ಲೂ ಮತ್ತೆ ಶಾಸಕ ಈಶ್ವರ ಖಂಡ್ರೆಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಪುರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಪಕ್ಷಗಳ ಬಲಾಬಲ: ಪುರಸಭೆಯ ಒಟ್ಟು 27 ಸ್ಥಾನಗಳಲ್ಲಿ 18 ಐಎನ್‌ಸಿ, 04 ಬಿಜೆಪಿ, 04 ಜೆಡಿಎಸ್, 01 ಸ್ಥಾನ ಪಕ್ಷೇತರ ಜಯಗಳಿಸಿವೆ. ಪ್ರಚಾರದ ಸಮಯದಲ್ಲಿ ಮೂರು ಪಕ್ಷಗಳ ಮುಖಂಡರು, ಪುರಸಭೆ ಅಕಾರ ಚುಕ್ಕಾಣಿ ಹಿಡಿಯುವ ಸಲುವಾಗಿ ಸುಡುಬಿಸಿಲಿನಲ್ಲಯೇ ವ್ಯಾಪಕ ಪ್ರಚಾರ ನಡೆಸಿದ್ದರು. ಶಾಸಕ ಈಶ್ವರ ಖಂಡ್ರೆ ಅವರ ಅನುದಾನದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವೇ ನಮಗೆ ಬೇಕು ಎನ್ನುವ ರೀತಿಯಲ್ಲಿ ಮತದಾರ ತೀರ್ಪು ನೀಡಿರುವುದು ಕಂಡು ಬಂದಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಗುದ್ದಾಟದ ಮಧ್ಯ, ವಾರ್ಡ್ 19ರಲ್ಲಿ ಪಕ್ಷೇತರ ಅಭ್ಯರ್ಥಿ ಶಂಭುಲಿಂಗ ಸ್ವಾಮಿ ಗೆಲುವು ಸಾಧಿಸಿರುವುದು ವಿಶೇಷವಾಗಿದೆ. ಚುನಾವಣಾ ಫಲಿತಾಂಶದ ಮತ ಎಣಿಕೆ ಕೇಂದ್ರದಲ್ಲಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದೇ ಶಾಂತ ರೀತಿಯಿಂದ ಎಣಿಕೆ ಕಾರ್ಯ ನಡೆಯಿತು. ಪ್ರಸ್ತುತ ಚುನಾವಣೆಯ ಎಣಿಕೆ ಕೇಂದ್ರದಲ್ಲಿ ಹಾಜರಿದ್ದ ಮೂರು ಪಕ್ಷದ ಅಭ್ಯರ್ಥಿಗಳು ಮತ್ತು ಅವರ ಏಜೆಂಟರು, ಗೆದ್ದವರು, ಸೋತವರೂ ಯಾವುದೇ ತರಹದ ಭೇದ ಮಾಡದೇ ಸಂಭ್ರಮಾಚರಣೆ ಮಾಡಿದ್ದು ವಿಶೇಷವಾಗಿತ್ತು.