ಮೂಡುಬಿದಿರೆ: ಗುರುವಾರ ಸಂಜೆ ನಿಧನ ಹೊಂದಿದ ತೆಂಕುತಿಟ್ಟು ಯಕ್ಷರಂಗದ ಭೀಷ್ಮ, ಬದುಕಿರುವಾಗಲೇ ದಂತಕತೆಯಾಗಿದ್ದ ಬಲಿಪ ನಾರಾಯಣ ಭಾಗವತರ ಅಂತ್ಯಕ್ರಿಯೆ ಗುರುವಾರ ತಡರಾತ್ರಿ ಮಾರೂರು ನೂಯಿಯಲ್ಲಿರುವ ಬಲಿಪರ ಮನೆಯ ಸಮೀಪ ಜರಗಿತು.
ಚಿತೆಗೆ ಅವರ ಹಿರಿಯ ಪುತ್ರ ಬಲಿಪ ಮಾಧವ ಭಟ್ ಅಗ್ನಿಸ್ಪರ್ಶಗೈದರು. ಇನ್ನಿಬ್ಬರು ಪುತ್ರರಾದ ಬಲಿಪ ಶಿವ ಶಂಕರ್ ಬಲಿಪ ಶಶಿಧರ, ಭಾಗವತರ ಕುಟುಂಬದವರು, ಅಭಿಮಾನಿಗಳು ಉಪಸ್ಥಿತರಿದ್ದರು. ಯಕ್ಷಗಾನ ರಂಗದಲ್ಲಿ ಆರೇಳು ದಶಕ ಮೆರೆದ ಗಾನ ಯಾನದ ಚೇತನ ಪಂಚಭೂತಗಳಲ್ಲಿ ಲೀನವಾಗು ವಾಗ ರಾತ್ರಿ ಗಂ.ಟೆ 3.45. ಆಗಿತ್ತು.
ಕಟೀಲು ಕ್ಷೇತ್ರದ ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಪ್ರಸಾದ ಆಸ್ರಣ್ಣ , ಪ್ರಮುಖರಾದ ಉದ್ಯಮಿ ಕೆ. ಶ್ರೀಪತಿ ಭಟ್, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಬಲಿಪರ ಶಿಷ್ಯ, ಪಟ್ಲ ಫೌಂಡೇಶನ್ ಮುಖ್ಯಸ್ಥ ಪಟ್ಲ ಸತೀಶ ಶೆಟ್ಟಿ, ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಕಟೀಲು ಮೇಳದ ಭಾಗವತರಾದ ಅಂಡಾಲ ದೇವಿಪ್ರಸಾದ ಶೆಟ್ಟಿ, ಶ್ರೀನಿವಾಸ ಬಳ್ಳಮಂಜ, ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಚೈತನ್ಯ ಪದ್ಯಾಣ, ವಾಸುದೇವ ರಂಗಾ ಭಟ್, ಚಿನ್ಮಯಿ ಕಲ್ಲಡ್ಕ, ದಿವಾಣ ಶಿವಶಂಕರ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ್ ಭಟ್, ಸುಬ್ರಾಯ ಹೊಳ್ಳ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಚಂದ್ರಮಂಡಲ ಗಣೇಶ್, ಕುಪ್ಪೆಪದವು ಉಮೇಶ್ ಮೊದಲಾದ ಕಲಾವಿದರು, ವಿಮರ್ಶಕ ಎಂ. ಶಾಂತರಾಮ ಕುಡ್ವ, ಸಂಘಟಕ ಸದಾಶಿವ ನೆಲ್ಲಿಮಾರು ಮೊದಲಾದವರು ಪಾಲ್ಗೊಂಡಿದ್ದರು.
ಶುಕ್ರವಾರ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಬಲಿಪರ ಮನೆಗೆ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.