ಈರೇಗೌಡ ನಿರ್ದೇಶನದ “ಬಳೆ ಕೆಂಪ’ ಇದೀಗ ನ್ಯೂಯಾರ್ಕ್ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ, ಅಲ್ಲಿ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ, ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಈರೇಗೌಡರು ಸದ್ಯದಲ್ಲೇ ನ್ಯೂಯಾರ್ಕ್‌ಗೆ ಹೋಗಲಿದ್ದಾರೆ …
ಒಂದೇ ಉಸಿರನಲ್ಲಿ ಇಷ್ಟನ್ನೆಲ್ಲಾ ಹೇಳಿಬಿಟ್ಟರೆ, ಅರ್ಥವಾಗುವುದು ಕಷ್ಟವಾಗಬಹುದು. ಸ್ವಲ್ಪ ಬಿಡಿಸಿ ಹೇಳಬೇಕೆಂದರೆ, “ತಿಥಿ’ ಚಿತ್ರಕ್ಕೆ ಕಥೆ ಬರೆದು, ಆ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಈರೇಗೌಡ, ಇದೀಗ “ಬಳೆ ಕೆಂಪ’ ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಈ ಚಿತ್ರಕ್ಕೆ ಕಥೆ ಬರೆದಿರುವುದಷ್ಟೇ ಅಲ್ಲ, ಸ್ವತಂತ್ರ ನಿರ್ದೇಶಕರಾಗಿಯೂ ಹೆಜ್ಜೆ ಇಟ್ಟಿದ್ದಾರೆ. ಈ ವರ್ಷದ ಫೆಬ್ರವರಿ ಹೊತ್ತಿಗೆ ಚಿತ್ರ ಸಂರ್ಪೂವಾಗಿತ್ತು. ಅದೇ ಸಂದರ್ಭದಲ್ಲಿ ಅವರು ರಾಟರ್‌ಡ್ಯಾಮ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೂ ಚಿತ್ರವನ್ನು ಕಳಿಸಿದ್ದರು.
ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರಶಸ್ತಿ ಪಡೆದ ಆ ಚಿತ್ರ ನಂತರದ ದಿನಗಳಲ್ಲಿ ಇಂಗ್ಲೆಂಡ್ ಮತ್ತು ಸ್ಪೇನ್ ಚಿತ್ರೋತ್ಸವಗಳಲ್ಲೂ ಭಾಗಿಯಾಗಿತ್ತು. ಈಗ ನ್ಯೂಯಾರ್ಕ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ ಎನ್ನುವುದು ವಿಶೇಷ. ಅಲ್ಲಿ ಚಿತ್ರವು ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು, ಚಿತ್ರೋತ್ಸವದಲ್ಲಿ ಭಾಗವಹಿಸಲು ಈರೇಗೌಡ ಸಹ ಸದ್ಯದಲ್ಲೇ ನ್ಯೂಯಾರ್ಕ್‌ಗೆ ತೆರಳಿದ್ದಾರೆ.
ತಾವು ನೋಡಿದ ಘಟನೆಗಳು ಮತ್ತು ಪಾತ್ರಗಳನ್ನೇ ಸ್ಫೂರ್ತಿಯಾಗಿಸಿಕೊಂಡು “ತಿಥಿ’ ಚಿತ್ರ ಮಾಡಿದ್ದ ಈರೇಗೌಡ, ಈ ಬಾರಿ “ಬಳೆ ಕೆಂಪ’ ಚಿತ್ರದಲ್ಲಿ ಗಂಡ-ಹೆಂಡತಿಯ ಸಂಬಂಧದ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ಚಿತ್ರವು ನಾಲ್ಕು ಪ್ರಮುಖ ಪಾತ್ರಗಳ ಸುತ್ತಲಿದ್ದು, ಈ ಬಾರಿಯೂ ಹೊಸಬರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹಳ್ಳಿಯವರನ್ನೇ ಇಟ್ಟುಕೊಂಡು ಈ ಚಿತರ ಮಾಡಿದ್ದಾರೆ. ಭಾಗ್ಯಶ್ರೀ, ಜ್ಞಾನೇಶ್, ನಾಗರಾಜ್, ಚಂದ್ರಶೇಖರ್ ಮುಂತಾದವರು ನಟಿಸಿರುವ ಈ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಮುಗಿದಿದೆ.
ಆಸ್ಕರ್ ಪ್ರಶಸ್ತಿಗಳಿಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದ್ದ ಮರಾಠಿ ಚಿತ್ರ “ಕೋರ್ಟ್’ ನಿರ್ಮಿಸಿದ್ದ ವಿವೇಕ್ ಗೋಂಬರ್, ತಮ್ಮ ಝೂ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸೌಮ್ಯಾನಂದ ಸಾಹಿ ಛಾಯಾಗ್ರಹಣ ಮಾಡಿದರೆ, ಬೆನೆಡಿಕ್ಟ್ ಟೇಲರ್ ಮತ್ತು ನರೇನ್ ಚಂದಾವರ್ಕರ್ ಸಂಗೀತ ಸಂಯೋಜಿಸಿದ್ದಾರೆ.