Advertisement

ಜೀವನ ಶ್ರೇಯಸ್ಸಿಗೆ ಸಂಸ್ಕಾರ-ಸಂಸ್ಕೃತಿ ಮುಖ್ಯ

03:37 PM Aug 03, 2019 | Naveen |

ಬಾಳೆಹೊನ್ನೂರು: ಸಂತಸ ಹಾಗೂ ಶಾಂತಿಯ ಬದುಕಿಗೆ ಅಧ್ಯಾತ್ಮದ ಅರಿವು ಮುಖ್ಯ. ಮನುಷ್ಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಆದರ್ಶ ಮೌಲ್ಯಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಸಂಸ್ಕಾರ- ಸಂಸ್ಕೃತಿಯ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುತ್ತದೆ ಎಂದು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಶ್ರೀ ರಂಭಾಪುರಿ ಪೀಠದಲ್ಲಿ 28ನೇ ವರ್ಷದ ಶ್ರಾವಣ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನದ ಅಂಗವಾಗಿ ನಡೆದ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಹಿಂದೂ ಸಂಸ್ಕೃತಿಯಲ್ಲಿ ಶ್ರಾವಣ ಮಾಸ ಅತ್ಯಂತ ಪವಿತ್ರವಾದುದು. ನಾಡಿನ ಎಲ್ಲ ಮಠ ಮಂದಿರ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಪುರಾಣ ಪ್ರವಚನ ಧರ್ಮ ಸಮಾರಂಭಗಳು ನಡೆಯುತ್ತಾ ಬರುತ್ತಿರುವುದು ಸರ್ವರಿಗೂ ವೇದ್ಯ. ಮನುಷ್ಯನಲ್ಲಿ ಸಾತ್ವಿಕ ಭಾವನೆಗಳು ಬೆಳೆದು ಬರಬೇಕಾಗಿದೆ ಎಂದರು.

ಆತ್ಮಾವಲೋಕನ ಅಗತ್ಯ: ಧರ್ಮ ಹೇಳುವುದು ಬಲು ಸುಲಭ. ಆದರೆ, ಆಚರಿಸಿ ಪರಿಪಾಲಿಸಿಕೊಂಡು ಬರುವುದು ಬಲು ಕಷ್ಟ. ವೈಚಾರಿಕತೆ ಹೆಸರಿನಲ್ಲಿ ಧರ್ಮಕ್ಕೆ ಚ್ಯುತಿ ತರುವ ಕೆಲವು ವ್ಯಕ್ತಿಗಳು ಕೂಡಾ ಇದ್ದಾರೆ. ಮನುಷ್ಯನಲ್ಲಿ ವೈಚಾರಿಕತೆ ಮನೋಭಾವನೆ ಬೆಳೆದು ಬರಲಿ. ಆದರೆ ಸಂಸ್ಕೃತಿಗೆ ಆದರ್ಶಕ್ಕೆ ಆತಂಕ ತರಬಾರದು. ತಾನು ಪರಿವರ್ತನೆಗೊಳ್ಳದೇ ಇನ್ನಿತರರೂ ಪರಿವರ್ತನೆಯಾಗಬೇಕೆಂಬುದು ಸಲ್ಲದ ಮಾತು. ಇನ್ನೊಬ್ಬರಿಗೆ ಹೇಳುವ ಮುನ್ನ ತಾನು ಧರ್ಮದ ದಾರಿಯಲ್ಲಿ ನಡೆಯುತ್ತಿದ್ದೇನೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ತಿಳಿಸಿದರು.

ಜಾತಿಗಿಂತ ನೀತಿ ದೊಡ್ಡದು: ಕೇವಲ ಜಾತಿಗೆ ಸೀಮಿತವಾಗುವ ಜನರಿಂದ ಸಮಷ್ಠಿ ಪ್ರಜ್ಞೆ ಹಾಗೂ ಸಾಮರಸ್ಯ ಎಂದಿಗೂ ಬೆಳೆಯಲು ಸಾಧ್ಯವಿಲ್ಲ. ಸುಳ್ಳಿಗೆ ಅನ್ಯಾಯಕ್ಕೆ ಹಲವು ದಾರಿ. ಆದರೆ, ಸತ್ಯ- ಧರ್ಮಕ್ಕೆ ಇರುವುದೊಂದೇ ದಾರಿ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆಗೆ ಒತ್ತು ಕೊಟ್ಟು ಜನಮನವನ್ನು ತಿದ್ದಿ ತೀಡಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಹಾಗೂ ಬಸವಾದಿ ಪ್ರಮಥರಿಗೆ ಸಲ್ಲುತ್ತದೆ ಎಂದರು.

Advertisement

ಸಮಾಜದ ಸ್ವಾಸ್ಥ ್ಯ ಕಾಪಾಡಿ: ಹಂಪಸಾಗರ ಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರಾರಂಭಿಸಿ ಸಮಾಜದ ಸ್ವಾಸ್ಥ ್ಯ ಕಾಪಾಡಿಕೊಂಡು ಬರುವುದು ಎಲ್ಲರ ಕರ್ತವ್ಯವಾಗಿದೆ. ಸತ್ವಭರಿತ ಜೀವನಕ್ಕೆ ಧರ್ಮ ಪಾಲನೆ ಅವಶ್ಯಕ. ಹಣಕ್ಕಿಂತ ಗುಣ ಮನುಷ್ಯನಿಗೆ ಭೂಷಣ. ಪೂರ್ವಜರ ಆದರ್ಶ ಚಾರಿತ್ರ್ಯ ಮತ್ತು ಅವರು ತೋರಿದ ದಾರಿ ನಮ್ಮೆಲ್ಲರಿಗೆ ದಾರಿದೀಪವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವೀಯ ಉದಾತ್ತ ಮೌಲ್ಯಗಳನ್ನು ಬೋಧಿಸಿದ್ದನ್ನು ಮರೆಯಲಾಗದು ಎಂದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಶ್ರೀ ಗುರು ದಾರುಕಾರಾಧ್ಯ ಶಾಸ್ತ್ರಿಗಳಿಂದ ಭಕ್ತಿ ಗೀತೆ ಜರುಗಿತು. ತೆಲಂಗಾಣದ ಛೇಗುಂಡದ ಕ್ಷೀರಲಿಂಗಯ್ಯ ಸ್ವಾಮಿ, ಹಂಪಸಾಗರದ ಸಿದ್ಧಲಿಂಗಯ್ಯ ಹಿರೇಮಠ, ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ವೇ. ಪಂಡಿತ ಮೋಕ್ಷನಾಥಯ್ಯ ಶಾಸ್ತ್ರಿಗಳು, ಲೆಕ್ಕಾಕಾರಿ ಸಂಕಣ್ಣವರ ಮತ್ತು ಪೂಜಾ ಕ‌ರ್ತೃಗಳು, ಶ್ರೀ ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ಪಾಲ್ಗೊಂಡಿದ್ದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.

ಶ್ರಾವಣ ಮಹಾ ಪೂಜೆ: ಶಾಂತಿ ಸನ್ಮಂಗಲ ಪ್ರಾಪ್ತಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಪ್ರಾತಃಕಾಲ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಶಕ್ತಿಮಾತೆ ಚೌಡೇಶ್ವರಿ, ಶ್ರೀ ಸೋಮೇಶ್ವರ ಮಹಾಲಿಂಗ ಹಾಗೂ ಲಿಂಗೈಕ್ಯ ಜಗದ್ಗುರುಗಳ ಗದ್ದುಗೆಗೆ ಶ್ರಾವಣ ಮಾಸದ ವಿಶೇಷ ಪೂಜೆ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next