ಬಾಳೆಹೊನ್ನೂರು: ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ದುಶ್ಚಟಗಳು ದೂರವಾಗಿ ಉತ್ತಮ ಅರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಕ್ರೀಡಾಪಟುಗಳು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಸೋಲು, ಗೆಲುವು ಮುಖ್ಯವಲ್ಲ ಎಂದು ಬಿಜೆಪಿಯ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವೆನಿಲ್ಲಾ ಭಾಸ್ಕರ್ ಹೇಳಿದರು.
ಪಟ್ಟಣದ ನಾರಾಯಣಗುರು ಸಮುದಾಯ ಭವನದ ಆವರಣದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ, ನಾರಾಯಣಗುರು ಯುವ ವೇದಿಕೆ, ಬಿಲ್ಲವ ಮಹಿಳಾ ಘಟಕ ಇವರ ಸಂಯುಕ್ತಾಶ್ರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ 2019-20ನೇ ಸಾಲಿನ ಜಿಲ್ಲಾ ಮಟ್ಟದ ಕೋಟಿ ಚೆನ್ನಯ್ಯ ಕ್ರೀಡಾಕೂಟ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕ್ರೀಡೆಯು ದೈಹಿಕ ಕಸರತ್ತಿಗೆ ಪೂರಕವಾಗಿದ್ದು, ಪ್ರತಿದಿನ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಆಟವಾಡುವುದರಿಂದ ಆರೋಗ್ಯದಲ್ಲಿ ಸ್ಥಿರತೆ ಕಾಣಬಹುದು. ಕ್ರೀಡಾಪಟುಗಳು ಕ್ರೀಡೆಯಲ್ಲಿ ಸ್ನೇಹ ಮನೋಭಾವದಿಂದ ಸ್ಪರ್ಧಿಸಿ ಪರಸ್ಪರ ಬಾಂಧವ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎ.ಪಿ.ದಯಾನಂದ್ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರು ಮೊಬೈಲ್, ದುಶ್ಚಟಗಳಿಂದ ಹೊರಬಂದು ಇಂತಹ ಗ್ರಾಮೀಣ ಕ್ರೀಡಾಕೂಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು ಎಂದರು.
ಭದ್ರಾ ಎಸ್ಟೇಟ್ ವ್ಯವಸ್ಥಾಪಕ ಮತ್ತು ವಿನಯ ಕ್ಯಾಂಟೀನ್ ಮಾಲೀಕ ಸದಾಶಿವ ಕ್ರೀಡಾಕೂಟ ಉದ್ಘಾಟಿಸಿದರು. ಶ್ರೀನಾರಾಯಣಗುರು ಯುವ ವೇದಿಕೆ ಅಧ್ಯಕ್ಷ ಮುದುಗುಣಿ ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿಯ ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ವೆನಿಲ್ಲಾ ಭಾಸ್ಕರ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಂಘದ ಗೌರವಾಧ್ಯಕ್ಷ ಸತೀಶ್ ಅರಳಿಕೊಪ್ಪ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ತಿಮ್ಮಪ್ಪ ಸಾಲಿಯಾನ್, ಉಪಾಧ್ಯಕ್ಷ ಶೇಖರ್ ಇಟ್ಟಿಗೆ, ಸಿ.ಪಿ.ರಮೇಶ್, ಕಾರ್ಯದರ್ಶಿ ಚಂದ್ರಹಾಸ್, ಎಂ.ಜೆ.ಹರೀಶ್, ಜಯಾಪ್ರಭಾಕರ್, ನಿಖೀಲೇಶ್ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಹಾಗೂ ಬಿಲ್ಲವ ಸಮಾಜ ಬಾಂಧವರು, ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿದ್ದು, ಬಿಲ್ಲವ ಸಮಾಜ ಬಾಂಧವರು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಆಗಮಿಸಿದ ಎಲ್ಲಾ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು. ಶೇಖರ್ ಪ್ರಾರ್ಥಿಸಿದರು. ಇಟ್ಟಿಗೆ ಪ್ರಶಾಂತ್ ನಿರೂಪಿಸಿದರು. ಕೆ.ಪ್ರಸಾದ ಸ್ವಾಗತಿಸಿದರು. ಶಶಿಕಾಂತ ವಂದಿಸಿದರು.