Advertisement

ಬನ್ನಿಮಹಾಕಾಳಿ ಉತ್ಸವ ಮೂರ್ತಿ ಹೊತ್ತು ಕೆಂಡ ಹಾತ್ತು  ಭಕ್ತರು

12:59 PM Oct 09, 2019 | Naveen |

ಬಾಳೆಹೊನ್ನೂರು: ಶ್ರೀ ಕ್ಷೇತ್ರ ಉಜ್ಜಯಿನಿ ಆದಿಶಕ್ತಿ ಶ್ರೀ ಬನ್ನಿಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀ ಬನ್ನಿಮಹಾಕಾಳಿ ಉತ್ಸವ ಮೂರ್ತಿಯನ್ನು ಹೊತ್ತು ಭಕ್ತರು ಕೆಂಡ ಹಾಯ್ದರು.

Advertisement

ಸಮೀಪದ ಖಾಂಡ್ಯ ಹೋಬಳಿ ಉಜ್ಜಯಿನಿ ಶ್ರೀ ಆದಿಶಕ್ತಿ ಬನ್ನಿ ಮಹಾಕಾಳಿ ಅಮ್ಮನವರ ಮತ್ತು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವದ ಅಂಗವಾಗಿ ಸೋಮವಾರ ಆಯುಧ ಪೂಜೆ, ಶ್ರೀ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ವಿವಿಧ ಧಾರ್ಮಿಕ ಸಂಪ್ರದಾಯಗಳೊಂದಿಗೆ ಬಾಳೆಗಿಡ ನೆಟ್ಟು, ಅದರ ಮೇಲೆ ತೆಂಗಿನಕಾಯಿ ಇಟ್ಟು ಬಿಲ್ಲು ಬಾಣ ಹಾಗೂ ಕೋವಿಯಿಂದ ಗುರಿ ಹೊಡೆಯಲಾಯಿತು. ನಂತರ ಛತ್ರಿ, ಚಾಮರ ಮತ್ತು ಮಂಗಳವಾದ್ಯಗಳೊಂದಿಗೆ ಕೆಂಡದ ರಾಶಿಗೆ ಆರತಿ ಎತ್ತಿ ಪೂಜೆ ಸಲ್ಲಿಸಿ, ಶ್ರೀ ಮಲ್ಲಿಕಾರ್ಜುನಸ್ವಾಮಿ ಹಾಗೂ ಶ್ರೀ ಬನ್ನಿಮಹಾಕಾಳಿ ಅಮ್ಮನವರ ಉತ್ಸವ ಮೂರ್ತಿಯನ್ನು ಹೊತ್ತು ಕೆಂಡ ಹಾಯ್ದು ಭಕ್ತಿ ಸಮರ್ಪಿಸಲಾಯಿತು.

ಕೆಂಡೋತ್ಸವದ ನಂತರ ಶ್ರೀ ಆದಿಶಕ್ತಿ ಬನ್ನಿ ಮಹಾಕಾಳಿ ಅಮ್ಮನವರ ದೇವಸ್ಥಾನದ ಧರ್ಮಾಧಿಕಾರಿ ಯು.ಸಿ.ಗೋಪಾಲಗೌಡ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಶರನ್ನವರಾತ್ರಿ ದಸರಾ ನಾಡಹಬ್ಬಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿ ಶಕ್ತಿಯನ್ನು ಆರಾ ಧಿಸುವ ಬಹು ದೊಡ್ಡ ಹಬ್ಬವಾಗಿದೆ. ಜೀವನದ ಮೌಲ್ಯಗಳ ಪುನರುತ್ಥಾನದಿಂದ ಶ್ರೇಯಸ್ಸು ಕಾಣಲು ಸಾಧ್ಯ. ಮೂಲ ನಂಬಿಕೆಗಳನ್ನು ಜಾಗೃತಗೊಳಿಸಿ ಧರ್ಮ, ಸಂಸ್ಕೃತಿ ಮತ್ತು ಆದರ್ಶ ಪರಂಪರೆ ಬೆಳೆಸುವುದೇ ದಸರಾ ಮಹೋತ್ಸವದ ಮೂಲ ಗುರಿಯಾಗಿದೆ ಎಂದರು.

ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಮುಂಭಾಗದ ಅಗ್ನಿ ಕುಂಡದಲ್ಲಿ ಭಸ್ಮಕ್ಕೆ ದಿವ್ಯ ಶಕ್ತಿಯಿದ್ದು, ಒಂದು ವರ್ಷ ಕಾಲ ಆ ಭಸ್ಮವನ್ನು ಮನೆಯಲ್ಲಿ ಇರಿಸಿಕೊಂಡರೆ ಯಾವುದೇ ತೊಂದರೆಗಳು ಎದುರಾಗುವುದಿಲ್ಲವೆಂದು ತಿಳಿಸಿದರು.

Advertisement

ಶ್ರೀ ಗುರು ಪರದೇಶಪ್ಪನವರ ಮಠದ ವೇದಮೂರ್ತಿ ಮಧುಕುಮಾರ್‌, ಕೂಸುಗಲ್ಲು ಚಂದ್ರಶೇಖರಗೌಡರು, ಅಂಡವಾನೆ ಎ.ಟಿ.ಸುಬ್ರಾಯಗೌಡರು, ಜಯರಾಮ್‌, ಸುರೇಶ್‌ಗೌಡ, ಪಟ್ನ ಪಿ.ಎ.ಪುಟ್ಟಸ್ವಾಮೇಗೌಡರು, ತೋರುವಾನೆ ಟಿ.ಕಾಳಪ್ಪಗೌಡರು ಸೇರಿದಂತೆ ಖಾಂಡ್ಯ, ಬಾಸಾಪುರ, ಕಡುವಂತಿ, ಬಿದರೆ, ಗಂಗೇಗಿರಿ, ಚಂದ್ರವಳ್ಳಿ, ಕರಡಿಖಾನ್‌, ಚಿಕ್ಕಮಗಳೂರು, ಸಖರಾಯಪಟ್ಟಣ ಹಾಗೂ ಬಾಳೆಹೊನ್ನೂರು ಸುತ್ತಮುತ್ತಲ ಭಕ್ತರುಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next