Advertisement

ಅದ್ದೂರಿ ನವರಾತ್ರಿ ಮಹೋತ್ಸವ

12:48 PM Sep 30, 2019 | Naveen |

ಬಾಳೆಹೊನ್ನೂರು: ತಾಯಿ ಆದಿ ಶಕ್ತಿ ದುರ್ಗಾ ಮಾತೆಯು ಈ ಭೂಮಂಡಲವನ್ನು ಸಲುಹಿ ಸಕಲ ಜೀವರಾಶಿಗಳಿಗೂ ಮಹಾ ಮಾತೆಯಾಗಿದ್ದಾಳೆ. ಅಲ್ಲದೆ ದುರ್ಗಾದೇವಿಯನ್ನು ಭಕ್ತಿ, ಶ್ರದ್ಧೆಯಿಂದ ಆರಾಧಿಸಿದಲ್ಲಿ ಸಕಲ ಸೌಭಾಗ್ಯ ನೀಡುತ್ತಾಳೆ ಎಂದು ಶ್ರೀ ಕ್ಷೇತ್ರ ಹೊರನಾಡಿನ ಜಿ.ಬಿ.ಗಿರಿಜಾಶಂಕರ ಜೋಶಿ ಹೇಳಿದರು.

Advertisement

ಪಟ್ಟಣದ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿದ 10ನೇ ವರ್ಷದ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾದೇವಿಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಲೋಕ ಕಂಟಕರಾದ ಅಸುರರು ವಿಜೃಂಭಿಸಿ, ವಿಶ್ವ ಮಾನವ ಕಲ್ಯಾಣಕ್ಕೆ ಅಡಚಣೆಯುಂಟು ಮಾಡಿದಾಗ ಅವರನ್ನು ಸಂಹರಿಸಿ, ಧರ್ಮ ಸಂಸ್ಥಾಪನೆ ಮಾಡುವಲ್ಲಿ ತೋರ್ಪಡಿಸಿದ ಅದ್ಭುತ ಪರಾಕ್ರಮಗಳ ಸಾರವೇ ಈ ನವರಾತ್ರಿ ಪೂಜೆಯಾಗಿದೆ. ಭಕ್ತಕೋಟಿಯನ್ನು ಸಂರಕ್ಷಿಸುವಲ್ಲಿ ದುರ್ಗೆಯು ಭಕ್ತ ವತ್ಸಲೆಯೆಂಬ ವಿಖ್ಯಾತಿಯನ್ನು ಪಡೆದಿದ್ದಾಳೆ. ಒಂಬತ್ತು ದಿನಗಳ ಕಾಲ ಭಕ್ತಿ, ಶ್ರದ್ಧೆಯಿಂದ ತಾಯಿ ದುರ್ಗೆಯನ್ನು ಆರಾಧಿ ಸಿದಲ್ಲಿ ಸರ್ವ ಪಾಪಗಳೂ ಪರಿಹಾರವಾಗಿ ಬೇಡಿದ ವರವನ್ನು ನೀಡುವಳೆಂದು ಶ್ರೀ ಕಾಳಿಕಾ ಪುರಾಣದಲ್ಲಿ ಉಲ್ಲೇಖವಿದೆ ಎಂದರು.

ಶ್ರೀ ದುರ್ಗಾದೇವಿ ಪ್ರತಿಷ್ಠಾಪನೆ ಅಂಗವಾಗಿ ಹಂಸವಾಹಿನಿ ಬ್ರಾಹ್ಮಿ ಪೂಜಾ, ಸಪ್ತಶತೀ ಪಾರಾಯಣ ಪೂಜೆ ನಡೆಯಿತು. ಶ್ರೀ ದುರ್ಗಾದೇವಿ ಪ್ರತಿಷ್ಠಾಪನೆಗೂ ಮುನ್ನ ಶ್ರೀ ಕ್ಷೇತ್ರನಾಥ ಮಾರ್ಕಂಡೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಶ್ರೀ ಮೃತ್ಯುಂಬಿಕಾ ಅಮ್ಮನವರಿಗೆ ಅಭಿಷೇಕ ಮತ್ತು
ಸಹಸ್ರನಾಮಾರ್ಚನೆ ಹಾಗೂ ಎಲ್ಲ ದೇವರಿಗೆ ಫಲ ಸಮರ್ಪಣೆ ಮಾಡಲಾಯಿತು.

ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಅಧ್ಯಕ್ಷ ಎಚ್‌.ಡಿ.ನಾಗೇಶ್‌ ಹೆಗ್ಡೆ, ಕಾರ್ಯಾಧ್ಯಕ್ಷ ವೈ.ಮೋಹನ್‌ಕುಮಾರ್‌, ಉಪಾಧ್ಯಕ್ಷ ಕೆ.ಟಿ.ವೆಂಕಟೇಶ್‌, ಪ್ರಸನ್ನ ಭಟ್‌, ಕೆ.ಜಿ.ಭಟ್‌, ಗಣೇಶ್‌ಭಟ್‌, ರಾಜೇಶ್ವರಿಗಿ ಭಟ್‌, ಕಾರ್ಯದರ್ಶಿ ಆರ್‌.ಡಿ. ಮಹೇಂದ್ರ, ಖಜಾಂಚಿ ಭಾಸ್ಕರ್‌ ವೆನಿಲ್ಲಾ, ಪ್ರಣಸ್ವಿ ಪ್ರಭಾಕರ್‌, ತಾ.ಪಂ ಉಪಾಧ್ಯಕ್ಷ ಹೊಳೆಬಾಗಿಲು ಮಂಜು, ವಕೀಲ ಎಚ್‌.ಎಚ್‌. ಕೃಷ್ಣಮೂರ್ತಿ, ಕೇಶವಮೂರ್ತಿ, ಉಪೇಂದ್ರ ಆಚಾರ್ಯ, ಕೃಷ್ಣಭಟ್‌, ಶ್ರೀಕಾಂತ್‌,
ಶಿವರಾಮಶೆಟ್ಟಿ, ವಿಗ್ರಹ ಶಿಲ್ಪಿ ಮಣಿಕಂಠ, ಸುಂದರ, ವಿದ್ಯಾಶೆಟ್ಟಿ, ಚೈತನ್ಯ ವೆಂಕಿ ಸೇರಿದಂತೆ ಸಮಿತಿಯ ಎಲ್ಲಾ ಸದಸ್ಯರು ಮತ್ತು ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next