ಬಾಳೆಹೊನ್ನೂರು: ದೇಶದಲ್ಲಿ ಭಯೋತ್ಪಾದನೆ ಹತ್ತಿಕ್ಕಲು ಜಮ್ಮು- ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ್ದು ಸಮಯೋಚಿತವಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಎಂ.ಉಮೇಶ್ ತಿಳಿಸಿದರು.
ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಬಿ.ಕಣಬೂರು ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಚ್ಛಾಶಕ್ತಿ ಕೊರತೆಯಿಂದ ಈ ಹಿಂದಿನಿಂದಲೂ 370ನೇ ವಿಧಿಯನ್ನು ರದ್ದುಗೊಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರಕಾರದ ನಿರ್ಧಾರದಿಂದ ಭವಿಷ್ಯದ ದಿನಗಳಲ್ಲಿ ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಟ್ಟ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿರುವುದು ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದರು.
ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಅಪಾರ ನಷ್ಟ ಉಂಟಾಗಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರು ಮನೆ- ಮಠ ಕಳೆದುಕೊಂಡಿದ್ದಾರೆ. ಅವರಿಗೆ ಪುನರ್ವಸತಿ ಕೈಗೊಳ್ಳುವ ಜವಾಬ್ದಾರಿ ಸರಕಾರ ಹಾಗೂ ಜನಪ್ರತಿನಿಧಿಗಳ ಮೇಲಿದೆ. ಪಟ್ಟಣದಲ್ಲಿ ಭದ್ರಾ ನದಿ ಪ್ರವಾಹದಿಂದ ಅಪಾರ ನಷ್ಟ ಸಂಭವಿಸಿದೆ. ನಿರಾಶ್ರಿತರಿಗೆ ಸರಕಾರ ಹಾಗೂ ವಿವಿಧ ಸಂಘ- ಸಂಸ್ಥೆಗಳು ಸಹಾಯ ಹಸ್ತ ನೀಡಿದ್ದಾರೆ ಎಂದು ತಿಳಿಸಿದರು.
ಠಾಣಾಧಿಕಾರಿ ತೇಜಸ್ವಿ ಮಾತನಾಡಿ, ಮುಂಜಾಗರೂಕತೆ ಕ್ರಮವಾಗಿ ಪ್ರವಾಹ ಪರಿಸ್ಥಿತಿ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಿದ್ದರೂ ಕೆಲವು ಕುಟುಂಬಗಳ ಹಠಮಾರಿತನದಿಂದ ಸಮಸ್ಯೆಯುಂಟಾಯಿತು. ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲು ರಾತ್ರಿ ವೇಳೆ ಹರಸಾಹಸ ಪಡಬೇಕಾಯಿತೆಂದು ತಮ್ಮ ಅನುಭವ ಹಂಚಿಕೊಂಡರು. ಸಾರ್ವಜನಿಕ ಪ್ರಕಟಣೆಯನ್ನು ನಾಗರಿಕರು ಗಂಭೀರವಾಗಿ ಪರಿಗಣಿಸಬೇಕೆಂದು ಕಿವಿಮಾತು ಹೇಳಿದರು. ಸ್ಥಳೀಯರಾದ ಅವಿನಾಶ್ ಮಾತನಾಡಿ, ಮಲೆನಾಡಿಗೆ ಪ್ರವಾಹ ಪರಿಸ್ಥಿತಿ ಉಂಟಾಗಿ ಅಪಾರ ನಷ್ಟ ಸಂಭವಿಸಿರುವುದು ನಂಬಲೂ ಅಸಾಧ್ಯವಾಗಿದೆ ಎಂದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಮಹಮ್ಮದ್ ಹನೀಪ್ ಧ್ವಜಾರೋಹಣ ನೆರವೇರಿಸಿದರು. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ, ಜಿಪಂ ಚಂದ್ರಮ್ಮ ಮಾತನಾಡಿದರು. ತಾಪಂ ಉಪಾಧ್ಯಕ್ಷ ಮಂಜು ಹೊಳೆಬಾಗಿಲು, ಗ್ರಾಪಂ ಮಾಜಿ ಅಧ್ಯಕ್ಷರಾದ ಮಹಮ್ಮದ್ ಜುಹೇಬ್, ಅರುಣೇಶ್, ಬಿ.ಕೆ.ಮಧುಸೂದನ್, ರವಿಚಂದ್ರ, ನಾಡಕಚೇರಿ ಉಪ ತಹಶೀಲ್ದಾರ್ ನಾಗೇಂದ್ರ, ಪಿಡಿಒ ಸೋಮಶೇಖರ್, ಜೇಸಿ, ರೋಟರಿ, ಲಯನ್ಸ್ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಪಂ ಸದಸ್ಯರು, ನಿರಾಶ್ರಿತರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಪ್ರವಾಹದಲ್ಲಿಸಿಲುಕಿದವರನ್ನು ರಕ್ಷಣೆ ಮಾಡಿದ ಈಜುಗಾರರನ್ನು ಹಾಗೂ ಕಾರ್ಯಕರ್ತರನ್ನು ಗೌರವಿಸಲಾಯಿತು.
ಶಾಲಾ ಮಕ್ಕಳು ಪ್ರಾರ್ಥಿಸಿ, ಹಿರಿಯಣ್ಣ ನಿರೂಪಿಸಿ, ಜಾನ್ ಡಿಸೋಜ ಸ್ವಾಗತಿಸಿ, ಬಿ.ಕೆ.ಮಧುಸೂದನ್ ವಂದಿಸಿದರು.