Advertisement
ಹೊಳೆಬಾಗಿಲು, ತೆಪ್ಪದಗಂಡಿ ಹಾಗೂ ಮಾಗುಂಡಿ ಮತ್ತು ಮಹಲ್ಗೋಡಿನಲ್ಲಿ ರಸ್ತೆ ಮೇಲೆ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಬಾಳೆಹೊನ್ನೂರಿನಿಂದ ನರಸಿಂಹರಾಜಪುರ- ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಡೊಬಿಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಅಕ್ಕಪಕ್ಕದಲ್ಲಿದ್ದ ಅಂಗಡಿ, ಮಳಿಗೆಗಳು ಹಾಗೂ ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ಗೃಹೋಪಯೋಗಿ ಹಾಗೂ ದಿನಸಿ ವಸ್ತುಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.
Related Articles
Advertisement
1995ರಲ್ಲಿ ಇದೇ ರೀತಿ ಪ್ರವಾಹ ಏರ್ಪಟ್ಟಿದ್ದು, ಈ ಬಾರಿ ಸತತ ಮೂರು ಬಾರಿ ಪ್ರವಾಹ ಉಂಟಾಗಿ ದಾಖಲೆ ನಿರ್ಮಿಸಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ನೀರಿನ ಮಟ್ಟ ಒಂದೇ ಸಮನೆ ಏರುತ್ತಿದ್ದು, ಜನರನ್ನು ಆಂತಕಕ್ಕೀಡು ಮಾಡಿದೆ.
ಪಟ್ಟಣದ ಡೋಬಿ ಹಳ್ಳದ ಸಮೀಪ ವಿದ್ಯುತ್ ಕಂಬವೊಂದು ವಾಲಿಕೊಂಡಿದ್ದು ಅಪಾಯದ ಹಂತದಲ್ಲಿತ್ತು. ತಕ್ಷಣವೇ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕಾಗಮಿಸಿ ವಾಲಿದ್ದ ಕಂಬವನ್ನು ಸರಿಪಡಿಸಿದರು. ನದಿ ನೀರು ಏರಿಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸಿ ಪ್ರವಾಹವನ್ನು ವೀಕ್ಷಿಸಿದರು.
ವಿದ್ಯುತ್ ಸಂಪರ್ಕ ಕಡಿತ: ಅಕ್ಷರನಗರ, ಮೆಣಸುಕೂಡಿಗೆ, ಹಲಸೂರು, ದೊಡ್ಡಮುಂಡುಗ ಇನ್ನಿತರೆ ಭಾಗದಲ್ಲೂ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಪಟ್ಟಣದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಸಮಸ್ಯೆ ಉಂಟಾಗಿದೆ. ಭಾರೀ ಮಳೆಯಿಂದ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಹೊಳೆಬಾಗಿಲಿನಲ್ಲಿ ಜಿಪಂ ಸದಸ್ಯೆ ಚಂದ್ರಮ್ಮ ಅವರ ಮನೆಗೆ ನೀರು ನುಗ್ಗಿದ್ದು, ಒಟ್ಟು 5ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.