Advertisement

ಭದ್ರತೆಯೇ ಇಲ್ಲದ ಬಾಲಕಿಯರ ವಸತಿ ನಿಲಯ

04:55 PM Sep 20, 2019 | Naveen |

ಯಜ್ಞಪುರುಷ ಭಟ್
ಬಾಳೆಹೊನ್ನೂರು:
ಪಟ್ಟಣದ ಮೆಸ್ಕಾಂ ಪಕ್ಕದಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಯಾವುದೇ ಭದ್ರತೆ ಇಲ್ಲ. ಹಾಗಾಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಾಡಿಗೆ ಮನೆಯೊಂದರಲ್ಲಿ ವಸತಿ ನಿಲಯದ ವ್ಯವಸ್ಥೆ ಮಾಡಿದ್ದು, ಅಲ್ಲಿ 22 ವಿದ್ಯಾರ್ಥಿನಿಯರು ಆಶ್ರಯ ಪಡೆದಿದ್ದಾರೆ.

Advertisement

ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ಯಾವುದೇ ಕಾಂಪೌಂಡ್‌ ಇಲ್ಲದ ಕಾರಣ ಬಾಲಕಿಯರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿತ್ತು. ಈ ಬಗ್ಗೆ ಇಲಾಖೆ ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಇದರಿಂದ, ವಸತಿ ನಿಲಯದಲ್ಲಿ ಏನಾದರೂ ತೊಂದರೆಯಾದರೆ ಯಾರು ಜವಾಬ್ದಾರಿ ಎಂಬ ಪ್ರಶ್ನೆ ಎದುರಾಗಿದೆ.

ಈ ಸಂಬಂಧ ತಾಪಂ ಉಪಾಧ್ಯಕ್ಷ ಹೊಳೆಬಾಗಿಲು ಮಂಜು ಅವರು ಮಾತನಾಡಿ, ಹಲವಾರು ವರ್ಷಗಳಿಂದ ಇದೇ ಕಟ್ಟಡದಲ್ಲಿ ವಸತಿ ನಿಲಯವಿದೆ. ಆದರೆ, ಕಾಂಪೌಂಡ್‌ ಇಲ್ಲದ್ದರಿಂದ ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿಸಿದರು.

ಈ ಹಿಂದೆ ಅಳವಡಿಸಲಾಗಿದ್ದ ಸಿಸಿ ಟಿ.ವಿ. ಸಂಪರ್ಕ ಕಡಿತಗೊಳಿಸಲಾಗಿತ್ತು. ಈ ಸಂಬಂಧ ತಾಪಂ ಇಒ ಗಮನಕ್ಕೆ ತಂದು ಸಿಸಿ ಟಿ.ವಿ. ಸಂಪರ್ಕ ಕಲ್ಪಿಸಲಾಗಿದೆ. ಜೇಸಿ ವೃತ್ತದ ಪಕ್ಕದಲ್ಲಿರುವ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಸುಮಾರು 3.27 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ತ್ವರಿತವಾಗಿ ಕಾಮಗಾರಿ ಮಾಡಿಸುವಂತೆ ಜಿಪಂ ಅಧ್ಯಕ್ಷೆ ಹಾಗೂ ಸಿಇಒ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗುವುದೆಂದು ತಿಳಿಸಿದರು.

ಹಾಸ್ಟೆಲ್ ಸ್ಥಳ ಸುರಕ್ಷಿತವಲ್ಲ: ಮೆಸ್ಕಾಂ ಪಕ್ಕದಲ್ಲಿ ವಸತಿ ನಿಲಯವಿದ್ದು, ಮುಂಭಾಗದಲ್ಲಿ ಸುದರ್ಶಿನಿ ಚಿತ್ರಮಂದಿರವಿದೆ. ಪ್ರದರ್ಶನ ನಡೆಯದ ಚಿತ್ರಮಂದಿರ ಜಾಗ ಪೋಲಿ ಹುಡುಗರ ಅಡ್ಡೆಯಾಗಿದೆ. ಕೆಲವು ಯುವಕರು ಸಂಜೆ ಹೊತ್ತಿನಲ್ಲಿ ಮದ್ಯಪಾನ ಹಾಗೂ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಹಿಂದೆ ಗೃಹ ಸಚಿವರಾಗಿದ್ದ ಡಾ| ಜಿ. ಪರಮೇಶ್ವರ್‌ ಅವರು ಬಾಳೆಹೊನ್ನೂರಿಗೆ ಬಂದಾಗ ವಿದ್ಯಾಸಂಸ್ಥೆ ಕಾರ್ಯದರ್ಶಿಗಳು ಈ ಅಕ್ರಮ ಚಟುವಟಿಕೆ ಬಗ್ಗೆ ಅವರ ಗಮನಕ್ಕೆ ತಂದಿದ್ದರು. ಆಗ ಸಚಿವರು ಕ್ರಮದ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರ ಬಗ್ಗೆ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇದೆ ಎಂಬುದು ಪೋಷಕರ ಆಗ್ರಹವಾಗಿದೆ.

Advertisement

ವಿದ್ಯಾರ್ಥಿನಿಯರ ವಸತಿ ನಿಲಯ ಬದಲಾಯಿಸುವ ಬಗ್ಗೆ ಪರಿಶೀಲಿಸಲಾಗುತ್ತದೆ. ಸೂಕ್ತ ಕಟ್ಟಡ ಸಿಗದ ಕಾರಣ ಸಮಸ್ಯೆ ಉಂಟಾಗಿದೆ. ನೂತನ ಕಟ್ಟಡಕ್ಕೆ 3.27 ಕೋಟಿ ರೂ. ಮಂಜೂರಾಗಿದ್ದು, ಶೀಘ್ರವೇ ಅನುದಾನ ದೊರೆಯಲಿದೆ. ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು. ಬೇರೆ ಕಟ್ಟಡ ಸಿಕ್ಕಲ್ಲಿ ಸ್ಥಳಾಂತರ ಮಾಡಲಾಗುವುದು. ಭದ್ರತೆಯ ಬಗ್ಗೆ ರಾತ್ರಿ ಗಸ್ತು ಮಾಡುವಂತೆ ಪೊಲೀಸ್‌ ಇಲಾಖೆಗೆ ಪತ್ರ ಬರೆಯಲಾಗುವುದು.
ಧರ್ಮರಾಜು,
 ಜಿಲ್ಲಾ ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಕಲ್ಯಾಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next