ಬಾಳೆಹೊನ್ನೂರು: ಭಾದ್ರಪದ ಮಾಸದ ಚತುರ್ಥಿಯ ಮುನ್ನಾದಿನ ಮುತೈದೆಯರಿಗೆ ಸಕಲ ಸೌಭಾಗ್ಯ ನೀಡುವ ಗೌರಿ ಹಬ್ಬವನ್ನು ಸ್ವರ್ಣಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ ಎಂದು ಶ್ರೀ ರಂಭಾಪುರಿ ಪೀಠದ ರೇಣುಕ ಶಾಸ್ತ್ರಿಗಳು ಹೇಳಿದರು.
ಶ್ರೀ ರಂಭಾಪುರಿ ಪೀಠದಲ್ಲಿ ನಡೆದ ಸ್ವರ್ಣಗೌರಿ ವ್ರತಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಬಾರಿ ಗೌರಿ ಮತ್ತು ಗಣೇಶ ಹಬ್ಬ ಒಂದೇ ದಿನ ಆಚರಿಸುತ್ತಿರುವುದು ವಿಷೇಶವಾಗಿದೆ. ಸ್ವರ್ಣ ಎಂದರೆ ಬಂಗಾರ. ಬಂಗಾರದ ಬಣ್ಣದಂತೆ ಹೊಳೆಯುವ ಜಗನ್ಮಾತೆ ಗೌರಿಯನ್ನು ಈ ದಿನ ಷೋಡಶೋಪಚಾರದಿಂದ ಪೂಜಿಸಲಾಗುತ್ತದೆ. ಜಗನ್ಮಾತೆ ಗೌರಿ ಶಿವನನ್ನು ವರಿಸಿ ಕೈಲಾಸದಲ್ಲಿ ನೆಲೆಸಿರುವ ಗೌರಿ ವರ್ಷಕ್ಕೊಮ್ಮೆ ತವರಿನ ಭೂಮಿಗೆ ಬಂದು ಪೂಜೆ ಸ್ವೀಕರಿಸಿ, ಹೆಣ್ಣು ಮಕ್ಕಳಿಂದ ಬಾಗಿನ ಪಡೆದು ಸಂತೃಪ್ತಳಾಗಿ ಕೈಲಾಸಕ್ಕೆ ಹೋಗುತ್ತಾಳೆ ಎಂಬ ನಂಬಿಕೆ ಇದೆ ಎಂದರು.
ಮನುಷ್ಯನಿಗೆ ಆಸ್ತಿ, ಅಂತಸ್ತು, ಹಣ ಮುಂತಾದ ಭೌತಿಕ ಸಂಪತ್ತು ಎಷ್ಟೇ ಇದ್ದರೂ, ಮಾನಸಿಕ ಸಂಪತ್ತಾದ ಶಾಂತಿ-ನೆಮ್ಮದಿಯಿಲ್ಲದೇ ಹೋದರೆ ಜೀವನ ನಶ್ವರವಾಗುತ್ತದೆ. ಈ ಮಾನಸಿಕ ಸಂಪತ್ತನ್ನು ಕೇವಲ ಧಾರ್ಮಿಕ ಕಾರ್ಯಗಳಿಂದ ಮಾತ್ರ ಪಡೆಯಲು ಸಾಧ್ಯ ಎಂದರು.
ರಂಭಾಪುರಿ ಪೀಠದಲ್ಲಿ ಸಾಮೂಹಿಕವಾಗಿ ವಿಶಿಷ್ಟ ವಾದ್ಯಗೋಷ್ಠಿಗಳೊಂದಿಗೆ ಗೌರಿ-ಗಣೇಶ ತಂದು ಪೂಜಿಸಲಾಯಿತು. ನಂತರ ಪೀಠದಲ್ಲಿ ನಡೆದ ಸಾಮೂಹಿಕ ಗೌರಿ ಪೂಜೆಯಲ್ಲಿ ಮುತ್ತೈದೆಯರು ಭಾಗವಹಿಸಿ ಉಡಿ ತುಂಬುವ ಕಾರ್ಯ ನಡೆಸಿದರು.
ಹಬ್ಬಕ್ಕೆ ಅವಶ್ಯಕವಾದ ಹೂವು, ಹಣ್ಣು, ಬಳೆ, ಸೀರೆ ಮತ್ತಿತರ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಹಬ್ಬದ ಸಂತಸ ಕುಂದಿರಲಿಲ್ಲ. ಒಟ್ಟಾರೆ ಗೌರಿ-ಗಣೇಶ ಹಬ್ಬವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ರಂಭಾಪುರಿ ಪೀಠದ ಪ್ರಕಾಶ್ ಶಾಸ್ತ್ರಿಗಳು, ಕೊಟ್ರಯ್ಯ, ನಿರ್ಮಲಾ, ಕಮಲಮ್ಮ, ಶಿವಮ್ಮ, ಮಲ್ಲಮ್ಮ, ಕೋಮಲಾ, ಕಲ್ಪನಾ, ರಮ್ಯಶ್ರೀ, ಸಂತೋಷ್ ಕುಮಾರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.