ಬಾಳೆಹೊನ್ನೂರು: ಮಲೆನಾಡಿನಲ್ಲಿ ಅರಣ್ಯ ಇಲಾಖೆಯ ಸರ್ವಾಧಿಕಾರಿ ಧೋರಣೆ ಖಂಡಿಸಿ ಆ.14ರ ರಾತ್ರಿ ವಿವಿಧ ಸಂಘಟನೆಗಳೊಂದಿಗೆ ಮಧ್ಯರಾತ್ರಿ ಸ್ವಾತಂತ್ರ್ಯೋತ್ಸವ ಶೀರ್ಷಿಕೆಯಡಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಇವರ ಮುಂದಾಳತ್ವದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿಯ ಸಂಚಾಲಕ ಕೌಳಿ ರಾಮು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಮಲೆನಾಡಿನ ಉಳಿಕೆ ಕಂದಾಯ ಹಾಗೂ ಗೋಮಾಳ ಭೂಮಿಯನ್ನು ಇಲಾಖೆಗೆ ವರ್ಗಾಯಿಸಿಕೊಳ್ಳಲು ಸೆಕ್ಷನ್ 4(1) ನೋಟಿಫಿಕೇಶನ್ ಮಾಡಿಕೊಂಡು ಮೀಸಲು ಅರಣ್ಯ ಮಾಡಲು ಹೊರಟಿದೆ. ನೋಟಿಫಿಕೇಶನ್ ಆಗಿದೆ ಹೊರತು ಮೀಸಲು ಅರಣ್ಯವೆಂದು ಘೋಷಿಸುವ ಮೊದಲೇ ಅಕ್ರಮವಾಗಿ ಬಡವರ ಬದುಕನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಆ.3 ರಂದು ಮೇಗುಂದು ಹೋಬಳಿಯ ಅಗಳಗಂಡಿ ಗ್ರಾ.ಪಂ ವ್ಯಾಪ್ತಿಯ ಸರ್ವೇ ನಂ.127 ರಲ್ಲಿ ದಲಿತ ಸಮುದಾಯದ ಸದಾನಂದ ಎಂಬುವವರ ಒತ್ತುವರಿ ಕಂದಾಯ ಭೂಮಿಯಲ್ಲಿದ್ದ ಕಾಫಿ ಗಿಡವನ್ನು ಜೆಸಿಬಿ ಮೂಲಕ ನಾಶ ಮಾಡಿದ್ದಾರೆ. ಶೇಖರ್ ಎಂಬುವವರ ಜಮೀನಿಗೂ ಟ್ರಂಚ್ ಹೊಡೆದು ಹದುಬಸ್ತು ಮಾಡಲು ಹೊರಟಿದ್ದಾರೆ. ಅರಣ್ಯ ಇಲಾಖೆಯ ಒತ್ತುವರಿಯಾದರೆ ತೆರವುಗೊಳಿಸುವುದು ಸಹಜ. ಆದರೆ ಕಂದಾಯ ಭೂಮಿಯಲ್ಲಿ ಕಾಫಿ ತೋಟ ಮಾಡಿದನ್ನು ತೆರವುಗೊಳಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಿಗಳ ಹಿಂದೇಟು: ಜಿಲ್ಲಾದ್ಯಂತ ನೂರಾರು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಕಾಫಿ ತೋಟ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಬಲಾಡ್ಯ ಒತ್ತುವರಿದಾರರ ಒತ್ತುವರಿಯನ್ನು ತೆರವು ಮಾಡುವ ಬದಲು ದಲಿತರು ಕೂಲಿ ಕಾರ್ಮಿಕರು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಫಾರಂ ನಂ.53ರಲ್ಲಿ ಮಂಜೂರಾದ ಭೂಮಿಯನ್ನು ಕೆಲವೆಡೆ ವಶಪಡಿಸಿಕೊಂಡಿದ್ದಾರೆ. ನಮೂನೆ 53-57 ರಲ್ಲಿ ಸಾಗುವಳಿ ಹಕ್ಕಿಗಾಗಿ ಸಾವಿರಾರು ಬಡವರ ಅರ್ಜಿಗಳು ಇತ್ಯರ್ಥವಾಗದೇ ಸರ್ಕಾರಿ ಕಚೇರಿಯಲ್ಲಿ ಧೂಳು ತಿನ್ನುತ್ತಿದೆ. ಅರಣ್ಯ ಇಲಾಖೆ ಏಕಪಕ್ಷೀಯವಾಗಿ ಹಿಡುವಳಿ ಭೂಮಿಯನ್ನು ಸೆಕ್ಷನ್ 4 (1) ಅಡಿಯಲ್ಲಿ ವಶಪಡಿಸಿಕೊಳ್ಳುತ್ತಿರುವುದು ಖಂಡನೀಯ. ಕೂಡಲೇ ಜೆಸಿಬಿ ಮೂಲಕ ಟ್ರಂಚ್ ಹೊಡೆಯುವುದನ್ನು ನಿಲ್ಲಿಸಬೇಕು. ಇಲ್ಲದೇ ಹೋದ ಪಕ್ಷದಲ್ಲಿ ಆ.14ರ ರಾತ್ರಿ ಹೋರಾಟದ ನಂತರ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಸದಾನಂದ ಮಾತನಾಡಿ, ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕಾಫಿ ಗಿಡಗಳನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿದ್ದಾರೆ. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಗುಡ್ಡೇತೋಟ ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ತನಗಾದ ಅನ್ಯಾಯದ ಬಗ್ಗೆ ಮಾಹಿತಿ ನೀಡಿ ಮನವಿ ಮಾಡಿದರೂ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿಯವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.