ಬಾಳೆಹೊನ್ನೂರು: ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿ 20 ದಿನ ಕಳೆದರೂ ನಿರಾಶ್ರಿತರಾದ ಆದಿವಾಸಿ ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಯಾವುದೇ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಮೂಲ ಆದಿವಾಸಿ ವೇದಿಕೆ ರಾಜ್ಯಾಧ್ಯಾಕ್ಷ ಕೆ.ಎನ್.ವಿಠಲ್ ಆರೋಪಿಸಿದರು.
ಖಾಂಡ್ಯ ಹೋಬಳಿ ಬಿದರೆ ಗ್ರಾ.ಪಂ. ವ್ಯಾಪ್ತಿಯ ತ್ರಾಸ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಗ್ರಾಮದಲ್ಲಿ ವಾಸವಾಗಿರುವ ಲಕ್ಷ್ಮಿ , ಸೀತು ಹಾಗೂ ಸುಧಾಕರ್ ಕುಟುಂಬಗಳೇ ಇದಕ್ಕೆ ಸಾಕ್ಷಿಯಾಗಿವೆ. ಇದುವರೆಗೂ ಯಾವುದೇ ರೀತಿಯ ಪರಿಹಾರ ನೀಡದೇ ಇರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಅಧಿಕಾರಿಗಳ ವರ್ತನೆ ಖಂಡಿಸುವುದಾಗಿ ತಿಳಿಸಿದರು.
ಸರ್ಕಾರ ಆದೇಶಿಸಿದಂತೆ ನಿರಾಶ್ರಿತರಿಗೆ 10 ಸಾವಿರ ರೂ. ಪರಿಹಾರದ ಚೆಕ್ ಹಾಗೂ ಜಿಲ್ಲಾಡಳಿತದ ವತಿಯಿಂದ ಆಹಾರದ ಕಿಟ್ ವಿತರಿಸಬೇಕಿತ್ತು. ಆದರೆ, ಇದುವರೆಗೂ ನೀಡಿಲ್ಲ. ಭದ್ರಾ ಅಭಯಾರಣ್ಯ ಪ್ರದೇಶದಲ್ಲಿ ವಾಸವಾಗಿರುವ ಈ ಕುಟುಂಬಗಳು ಮೂಲಭೂತ ಸೌಕರ್ಯವಿಲ್ಲದೇ ಪರದಾಡುವ ಸ್ಥಿತಿ ಉಂಟಾಗಿದೆ. ಇಂದು ಆದಿವಾಸಿ ಕುಟುಂಬಗಳ ವತಿಯಿಂದ ಸಂಗ್ರಹಿಸಿದ ದೇಣಿಗೆಯಿಂದ ಅಗತ್ಯ ವಸ್ತುಗಳನ್ನು ತಾತ್ಕಾಲಿಕವಾಗಿ ವಿತರಿಸಲಾಗಿದೆ. ಜಿಲ್ಲಾಡಳಿತದ ನಿರ್ಲಕ್ಷ್ಯದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಮಾಜ ಕಲ್ಯಾಣ ಸಚಿವರ ಗಮನಕ್ಕೂ ತರಲಾಗುವುದೆಂದು ತಿಳಿಸಿದರು.
ನಿರಾಶ್ರಿತ ಸುಧಾಕರ್ ಮಾತನಾಡಿ, ಪ್ರವಾಹದ ನೀರು ಮನೆ ತುಂಬ ಸುತ್ತುವರೆದಿದ್ದು, ರಾತ್ರಿ ವೇಳೆಯಲ್ಲಿ ಹರಸಾಹಸಪಟ್ಟು ಪ್ರವಾಹದಿಂದ ಪಾರಾಗಿದ್ದೇವೆ. ಗ್ರಾ.ಪಂ. ಪಿಡಿಒ ಬಂದು ಮಾಹಿತಿ ಪಡೆದು ಹೋಗಿದ್ದು, ಯಾವುದೇ ಪರಿಹಾರ ನೀಡಿಲ್ಲ. ಮನೆಯೊಳಗೆ ನೀರು ನಿಂತಿದ್ದು, ಯಾವುದೇ ಕ್ಷಣದಲ್ಲೂ ಕುಸಿಯಬಹುದಾಗಿದೆ ಎಂದು ಅಳಲು ತೋಡಿಕೊಂಡರು.
ನಿರಾಶ್ರಿತೆ ಲಕ್ಷಿ ್ಮೕ ಮಾತನಾಡಿ, ಮಧ್ಯರಾತ್ರಿ ಹಠಾತ್ ಪ್ರವಾಹ ಏರಿಕೆಯಿಂದ ನಿತ್ಯ ಬಳಕೆ ವಸ್ತುಗಳು, ಆಹಾರ ಸಾಮಗ್ರಿಗಳು ಕೆಟ್ಟುಹೋಗಿವೆ. ಯಾವೊಬ್ಬ ಜನಪ್ರತಿನಿಧಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಶಾಸಕರಾಗಲಿ ಭೇಟಿ ನೀಡಿಲ್ಲ. ಮತ ಕೇಳಲು ಮಾತ್ರ ರಾಜಕಾರಣಿಗಳು ಚುನಾವಣಾ ಸಂದರ್ಭದಲ್ಲಿ ಈ ಕಡೆಗೆ ಭೇಟಿ ನೀಡುತ್ತಾರೆ. ನಂತರದ ದಿನಗಳಲ್ಲಿ ರಾಜಕಾರಣಿಗಳು ಇತ್ತ ಮುಖ ಮಾಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಕೃಷ್ಣರಾಜು, ನ.ರಾ.ಪುರ ಸಂಘದ ಅಧ್ಯಕ್ಷ ಮಂಜುನಾಥ್, ಚಾಲಕ ಮಂಜು, ರಾಷ್ಟ್ರೀಯ ಆದಿವಾಸಿ ಆಂದೋಲನದ ಸಂಚಾಲಕಿ ಜ್ಯೋತಿ ಸೇರಿದಂತೆ ಸಂಘದ ಸದಸ್ಯರು, ನಿರಾಶ್ರಿತರು ಉಪಸ್ಥಿತರಿದ್ದರು.