ಉಳ್ಳಾಲ: ರವಿವಾರ ರಾತ್ರಿ ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಕೊಣಾಜೆ ಠಾಣೆ ಪೊಲೀಸರು ಬಂಧಿಸಿದ್ದು. ಮಸೀದಿಯ ಎದುರು ಘೋಷಣೆ ಕೂಗಿದ ವಿಚಾರದಲ್ಲಿ ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧವೂ ಕೇಸು ದಾಖಲಾಗಿದೆ.
ಚೂರಿ ಇರಿತಕ್ಕೆ ಸಂಬಂಧಿಸಿದಂತೆ ಬೋಳಿಯಾರು ನಿವಾಸಿಗಳಾದ ಶಾಕೀರ್ (28), ಅಬ್ದುಲ್ ರಜಾಕ್ (40), ಅಬೂಬಕ್ಕರ್ ಸಿದ್ದಿಕ್ (35), ಸವಾದ್ (18) ಹಾಗೂ ಹಫೀಝ್ (24) ಬಂಧಿತ ಆರೋಪಿಗಳು. ಸಿಸಿ ಟಿವಿ ದೃಶ್ಯಗಳ ಆಧಾರದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮಸೀದಿ ಎದುರು ಪ್ರಚೋದನಕಾರಿ ಘೋಷಣೆ ಕೂಗಿದ ಆರೋಪದಡಿ ಸುರೇಶ್, ವಿನಯ್, ಸುಭಾಷ್, ರಂಜಿತ್ ಹಾಗೂ ಧನಂಜಯ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಬೋಳಿಯಾರ್ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಕೆ. ಅಬ್ದುಲ್ಲ ನೀಡಿದ ದೂರಿನಡಿ ಎಫ್‌ಐಆರ್ ದಾಖಲಾಗಿದೆ. ಹೊಟ್ಟೆಗೆ ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಹರೀಶ್ ಧರ್ಮನಗರ ಅವರಿಗೆ ರವಿವಾರ ರಾತ್ರಿಯೇ ಆಪರೇಷನ್ ನಡೆಸಿದ್ದು, ತೀರ್ವ ನಿಗಾ ಘಟಕದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಬೆನ್ನಿಗೆ ಚೂರಿ ಇರಿತಕ್ಕೊಳಗಾದ ನಂದಕುಮಾರ್ (24) ಚೇತರಿಸಿಕೊಳ್ಳುತ್ತಿದ್ದು, ಹಲ್ಲೆಗೊಳಗಾದ ಕೃಷ್ಣ ಕುಮಾರ್ ಹೊರ ರೋಗಿಯಾಗಿ ಚೆಕಿತ್ಸೆ ಪಡೆದಿದ್ದಾರೆ.
ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರಕಾರ ಪ್ರಮಾಣ ವಚನ ಸ್ವೀಕಾರ ಹಿನ್ನಲೆಯಲ್ಲಿ ರವಿವಾರ ಉಳ್ಳಾಲ ತಾಲೂಕಿನಾದ್ಯಂತ ವಿಜಯೋತ್ಸವ ಆಚರಿಸಿದ್ದು, ಬೋಳಿಯಾರು ಗ್ರಾಮ ಸಮಿತಿಯ ಆಶ್ರಯದಲ್ಲಿಯೂ ಧರ್ಮನಗರದಿಂದ ಬೋಳಿಯಾರು ಮಾರ್ಗವಾಗಿ ಚೇಳೂರುವರೆಗೆ ತಿರುಗಿ ಬೋಳಿಯಾರ್‌ನಲ್ಲಿ ವಿಜಯೋತ್ಸವ ಸಮಾರೋಪ ನಡೆದಿತ್ತು. ಬೋಳಿಯಾರ್ ಮಸೀದಿ ಎದುರು ಡಿಜೆ ಹಾಕಿ ಜಯಘೋಷ ಮಾಡಿ ತೆರಳಿದ್ದ ಮೆರವಣಿಗೆ ಮುಗಿದ ಬಳಿಕ ಬೈಕ್‌ನಲ್ಲಿ ಆಗಮಿಸಿದ್ದ ತಂಡ ಮಸೀದಿ ಎದುರು ಭಾರತ್ ಮಾತಾಕೀ ಜೈ ಎಂದು ಇನ್ನೊಮ್ಮೆ ಜಯಘೋಷ ಹಾಕಿದ್ದರು.
ಈ ಸಂದರ್ಭದಲ್ಲಿ ಅಲ್ಲೇ ಇದ್ದ ತಂಡವೊಂದು ಬೈಕ್ ಸವಾರರನ್ನು ಅಟ್ಟಾಡಿಸಿತ್ತು. ಇದೇ ಘಟನೆಯ ಮುಂದುವರಿದ ಭಾಗವಾಗಿ ಹರೀಶ್ ಮತ್ತಿಬ್ಬರು ಚಲಾಯಿಸುತ್ತಿದ್ದ ಬೈಕ್ ಮಸೀದಿಯಿಂದ 800 ಮೀಟರ್ ದೂರವಿರುವ ಬಾರೊಂದರ ಪಕ್ಕ ನಿಂತಿದ್ದಾಗ ಒಂದು ತಂಡ ಏಕಾಏಕಿಯಾಗಿ ನುಗ್ಗಿ ಬೈಕ್‌ನಲ್ಲಿ ಮೂವರನ್ನು ಎಳೆದಾಡಿಕೊಂಡು ಇಬ್ಬರಿಗೆ ಚೂರಿಯಿಂದ ಇರಿದು ಓರ್ವನಿಗೆ ಹಲ್ಲೆ ನಡೆಸಿ ಪರಾರಿಯಾಗಿತ್ತು.
ತಡರಾತ್ರಿ ಸ್ಟೇಷನ್ ಎದುರು ಪ್ರತಿಭಟನೆ
ಚೂರಿಯಿಂದ ಇರಿದ ಆರೋಪಿಗಳನ್ನು ತತ್‌ಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಕೊಣಾಜೆ ಪೊಲೀಸ್ ಠಾಣೆಯ ಎದುರು ಬಿಜೆಪಿ ಕಾರ್ಯಕರ್ತರರು ಪ್ರತಿಭಟನೆ ನಡೆಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಮುಖಂಡರು ಠಾಣೆಗೆ ಆಗಮಿಸಿ ಪೊಲೀಸ್ ಕಮಿಷನರ್ ಅವರೊಂದಿಗೆ ಮಾತುಕತೆ ನಡೆಸಿ ಆರೋಪಿಗಳನ್ನು ಬಂಧಿಸಿದ ಭರವಸೆ ನೀಡಿದ ಬಳಿಕ ಕಾರ್ಯಕರ್ತರು ಪ್ರತಿಭಟನೆಯನ್ನು ನಿಲ್ಲಿಸಿದರು.
ಬೋಳಿಯಾರ್‌ನಲ್ಲಿ ಬಿಗಿ ಬಂದೋಬಸ್ತ್
ಘಟನೆ ನಡೆದ ಬೋಳಿಯಾರ್‌ನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಮಸೀದಿ ಸೇರಿದಂತೆ ಬೋಳಿಯಾರ್ ಜಂಕ್ಷನ್‌ನಲ್ಲಿ ಕೆಎಸ್‌ಆರ್‌ಪಿ, ಸಿಆರ್‌ಪಿ ಮತ್ತು ಕೊಣಾಜೆ ಪೊಲೀಸರು ಬಿಗಿ ಬಂದೋಬಸ್ತ್ ಹಾಕಿದ್ದರು.
ಚೂರಿಯಿಂದ ಇರಿತಕ್ಕೊಳಗಾದ ಗಾಯಾಳುಗಳ ಆರೋಗ್ಯ ವಿಚಾರಿಸಲು ಆರ್‌ಎಸ್‌ಎಸ್ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್, ಸಂಸದ ಬ್ರಿಜೇಶ್ ಚೌಟ ಆಸ್ಪತ್ರೆಗೆ ಭೇಟಿ ನೀಡಿದರು.