ಕನ್ನಡದಲ್ಲಿ ಶೀರ್ಷಿಕೆಗಳಿಗೇನೂ ಬರವಿಲ್ಲ. ಅದರಲ್ಲೂ ತರಹೇವಾರಿ ಟೈಟಲ್‌ಗಳದ್ದೇ ಕಾರುಬಾರು. ಆ ಸಾಲಿಗೆ “ಸೆಕೆಂಡು ಬಕೆಟು ಬಾಲ್ಕನಿ’ ಚಿತ್ರವೂ ಸೇರಿದೆ. ಹೌದು, ಈ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್‌ಗೆ ರೆಡಿಯಾಗಿದ್ದಾರೆ ನಿರ್ದೇಶಕ ಅರಸು ಅಂತಾರೆ. “ಲವ್ ಇನ್ ಮಂಡ್ಯ’ ನಿರ್ದೇಶಿಸಿ, ಸುಮ್ಮನಾಗಿದ್ದ ಅರಸು, ಒಂದು ಗ್ಯಾಪ್ ತಗೊಂಡು ಇದೀಗ “ಸೆಕೆಂಡು ಬಕೆಟು ಬಾಲ್ಕನಿ’ ಚಿತ್ರ ಮಾಡೋಕೆ ರೆಡಿಯಾಗಿದ್ದಾರೆ.
ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಜವಾಬ್ದಾರಿಯೂ ಅವರದೇ. ಕರ್ಣ ಎಂಬ ಹೊಸ ಪ್ರತಿಭೆ ನಾಯಕರಾದರೆ, “ಸೋಡಾಬುಡ್ಡಿ’ ಚಿತ್ರದಲ್ಲಿ ನಟಿಸಿದ್ದ ಖುಷಿ ನಾಯಕಿಯಾಗಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್ ಇತರರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲರಿಗೂ ಟೈಟಲ್ ಬಗ್ಗೆ ಸ್ವಲ್ಪ ಗೊಂದಲ ಆಗಬಹುದು. ಪ್ರಶ್ನೆಯೂ ಕಾಡಬಹುದು.
ಈ ಶೀರ್ಷಿಕೆ ಇಡೋಕೆ ಕಾರಣವೂ ಇದೆ ಎಂದು ಹೇಳುವ ಅರಸು, “ಮೈಸೂರಲ್ಲಿ ನಡೆಯುವ ಕಥೆ ಇದಾಗಿದ್ದು, ನಾಲ್ವರು ಹುಡುಗರು ಥಿಯೇಟರ್ ಮುಂದೆ ಬ್ಲಾಕ್ ಟಿಕೆಟ್ ಮಾಡಿಕೊಂಡು ಬದುಕು ನಡೆಸುವ ಹಿನ್ನೆಲೆ ಇಟ್ಟುಕೊಂಡು ಕಥೆ ಮಾಡಲಾಗಿದೆ. ಮೈಸೂರು, ಮಂಡ್ಯ ಭಾಗದಲ್ಲಿ ಬ್ಲಾಕ್ ಟಿಕೆಟ್ ಮಾರುವ ಬಹುತೇಕರು “ಸೆಕೆಂಡು ಬಕೆಟು ಬಾಲ್ಕನಿ’ ಅಂತಾನೇ ಹೇಳಿಕೊಂಡು ಬ್ಲಾಕ್ ಟಿಕೆಟ್ ಮಾರಿ ಬದುಕು ಸವೆಸುತ್ತಾರೆ.
ಹಾಗಾಗಿ ಆ ಶೀರ್ಷಿಕೆ ಇಟ್ಟಿರುವುದಾಗಿ ಸ್ಪಷ್ಟನೆ ಕೊಡುತ್ತಾರೆ ನಿರ್ದೇಶಕರು. ಇಲ್ಲಿ ಸೆಕೆಂಡು ಅಂದರೆ ಸೆಕೆಂಡ್ ಕ್ಲಾಸ್ ಟಿಕೆಟ್, ಬಕೆಟು ಅಂದರೆ ಗಾಂಧಿ ಕ್ಲಾಸ್ ಟಿಕೆಟ್ ಎಂದರ್ಥ. ಅದನ್ನೇ ಇಟ್ಟುಕೊಂಡು ಹೊಸ ವಿಧಾನದಲ್ಲಿ ಕಥೆ ಹೇಳುವ ಪ್ರಯತ್ನ ಮಾಡಿದ್ದಾರಂತೆ ಅವರು.
ಈ ಚಿತ್ರವನ್ನು ಹರ್ಷ ಎಸ್ ಖಾಸನೀಸ್, ಸಂಜೀವ ಎಸ್ ಖಾಸನೀಸ್ ಮತ್ತು ಶ್ರೀಕಾಂತ್ ಎಸ್. ಖಾಸನೀಸ್ ನಿರ್ಮಾಣ ಮಾಡುತ್ತಿದ್ದಾರೆ. ಅಭಿಷೇಕ್ ಜಿ.ಕಾಸರಗೋಡು ಕ್ಯಾಮೆರಾ ಹಿಡಿದರೆ, ಅನೂಪ್ ಸೀಳಿನ್ ಸಂಗೀತವಿದೆ. ನಿರ್ದೇಶಕರು ಮಾರ್ಚ್ 1 ರಂದು ಚಿತ್ರದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಿದ್ದಾರೆ.