Advertisement

ಬಾಲವಾಡಿಯ ಬಾಲರು

07:30 AM Mar 23, 2018 | |

ನಾಯಿಮರಿ ನಾಯಿಮರಿ ತಿಂಡಿ ಬೇಕೇ’
“ಪುಟಾಣಿ ಕರುವೊಂದು ನಮ್ಮನೇಲಿದೆ’
“ಬಣ್ಣದ ತಗಡಿನ ತುತ್ತೂರಿ… ಕಾಸಿಗೆ ಕೊಂಡನು ಕಸ್ತೂರಿ’
“ತಟ್ಟು ಚಪ್ಪಾಳೆ… ಪುಟ್ಟ ಮಗು…’

ಹೀಗೆ ಒಂದಾದ ಮೇಲೊಂದರಂತೆ ಗೀತೆಗಳು ಸಾಗುತ್ತಿರುತ್ತವೆ. ಮಧುರವಾದ ಧ್ವನಿಗಳಿಂದ ಹೊರಬರುವ ಇಂತಹ ಗೀತೆಗಳಿಗೆ ಮತ್ತೂಂದಷ್ಟು ಪುಟ್ಟ ಹೆಜ್ಜೆಗಳು ಹೆಜ್ಜೆ ಹಾಕುತ್ತಾ ಸಂಭ್ರಮಿಸುತ್ತಾ ನರ್ತಿಸಲು ಆರಂಭಿಸಿದಾಗ ಎಲ್ಲರಿಗೂ ಸಂತಸ, ಸಂತೋಷ/ ಕುತೂಹಲ ದಣಿವರಿಯದ ಬಾಲ್ಯ ವಯಸ್ಸದು. ಒಬ್ಬ ಹೊಸ ಚೀಲ ಹಾಕಿಕೊಂಡು ಬಂದರೂ, ಹೊಸ ಬಟ್ಟೆ ಧರಿಸಿದರೂ, ಹೊಸಚೀಲ ಕೊಂಡರೂ ಉಳಿದ ಎಲ್ಲರಿಗೂ ಸಂತಸ. ಮತ್ತೆ ಆ ವಸ್ತುಗಳ ಬಣ್ಣದ ಮೇಲೆ ಮಾತ್ರ ವಿಮರ್ಶೆ ಹೊರತು ಬೆಲೆಯ ಮೇಲಲ್ಲ! (ಮೌಲ್ಯದ ಮೌಲ್ಯವು ತಿಳಿಯದ ವಯಸ್ಸು!) ಈ ಎಲ್ಲಾ ಚಟುವಟಿಕೆ ಮುಗಿದ ಬಳಿಕ ಅ… ಆ…. ಇ… ಈ… ಎಂದು ಗಟ್ಟಿಯಾಗಿ ಗಂಟಲು ಹರಿಯುವಂತೆ ಉಚ್ಚರಿಸುತ್ತಾ ಸ್ಲೇಟಿನ ಮೇಲೆ ಸಂಭ್ರಮದಿಂದ ಬರೆಯುವ ಶಬ್ದ, ಕೆಲವರಿಗೆ ಮಾತ್ರ ಇನ್ನೂ ಟೀಚರ್‌ ಕೈಹಿಡಿದು ಬರೆಸಬೇಕು. ಆಗ ನಾವು ಮಾತ್ರ ಸ್ವತಂತ್ರರಾಗಿ ಬರೆಯುತ್ತಿದ್ದೇವೆಂಬ ಹೆಮ್ಮೆ.

Advertisement

ಹೌದು! ಇದು ನಮ್ಮ ಬಾಲ್ಯದಲ್ಲಿನ ಬಾಲವಾಡಿಯ ಜೀವನ. ಆಡಳಿತಾತ್ಮಕವಾಗಿ “ಅಂಗನವಾಡಿ’ ಎಂಬ ಹೆಸರಿದ್ದರೂ ನಾವೆಲ್ಲಾ “ಬಾಲವಾಡಿ’ ಎಂದೇ ಕರೆಯುತ್ತಿದ್ದೆವು. ಮತ್ತು ಅದು ನಮಗೆ ಸಂತೋಷವೂ ಆಗಿತ್ತು. ಇಂತಿರ್ಪ ಬಾಲವಾಡಿಯ ಆ ನೆನಪು, ಬಾಲ್ಯ, ಆಟ-ಪಾಠಗಳೆಲ್ಲಾ ಇನ್ನೂ ನೆನಪಿದೆ. ಬಾಲ್ಯವೆಂದರೆ ಹಾಗೆಯೇ. ಸದಾ ಕುತೂಹಲದಿಂದ ಜಗತ್ತನ್ನು ನೋಡುವ ಜೀವನದ ಆರಂಭಿಕ ಹಂತವದು. ಇಂತಹ ಸಂದರ್ಭದಲ್ಲಿ ಬಾಲ್ಯದ ಜೀವನ, ಸುತ್ತಮುತ್ತಲ ಪರಿಸರ, ಪ್ರಾಥಮಿಕ ಶಿಕ್ಷಣಗಳು ಜೀವನದ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತವೆ.

ನಾವು ಬಾಲವಾಡಿಯಲ್ಲಿರುವಾಗ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನ, ಗಾಂಧಿ ಜಯಂತಿಯ ದಿನಗಳಲ್ಲಂತೂ ಅಪಾರ ಸಂತಸ. ನೃತ್ಯ, ಗೀತೆ, ಗಾಯನದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಮನೆಗೆ ಮರಳುವಾಗ ಒಂದೊಂದು ಲಡ್ಡು , ಚಾಕಲೇಟ್‌ನೊಂದಿಗೆ ತೆರಳಿದರೆ ಕಾರ್ಯಕ್ರಮ ಯಶಸ್ವಿಯಾದಂತೆ. ಇನ್ನುಳಿದಂತೆ ಇತರ ದಿನಗಳಲ್ಲಿ ಕ್ರಿಕೆಟ್‌ ಚೆಂಡಿನಾಕಾರದ ಗುಂಡಗಿನ ಸಿಹಿತಿಂಡಿ (ಸರ್ಕಾರದಿಂದ ಪುಡಿ ರೂಪದಲ್ಲಿ ದೊರೆಯುತ್ತಿದ್ದ ಆಹಾರಕ್ಕೆ ಬಿಸಿನೀರು ಹಾಕಿ ದೊಡ್ಡ ಉಂಡೆಯಾಕಾರದಲ್ಲಿ ಕಟ್ಟುತ್ತಿದ್ದರು) ಅದಂತೂ ನಮ್ಮ ಪರಮಶ್ರೇಷ್ಠ ತಿನಿಸಾಗಿತ್ತು. (ಇಂದಿನಂತೆ ಹಾಲು, ಮೊಟ್ಟೆ ಇರಲಿಲ್ಲ).

ಬಾಲವಾಡಿಯಲ್ಲಿ ಆಡುತ್ತಿದ್ದ ಚಿನ್ನಿದಾಂಡು, ಕೆರೆ-ದಡ, ಲಗೋರಿ, ಕುಂಟೆಬಿಲ್ಲೆಗಳಂತೂ ನಮ್ಮ ಪಾಲಿನ ಶ್ರೇಷ್ಠ ಕ್ರೀಡೆಗಳಂತೆ! ಮಳೆಗಾಲದಲ್ಲಿ ನೀರಮೇಲೆ ಬಿಡುತ್ತಿದ್ದ ದೋಣಿ, ಕಾಗದದಿಂದ ಮಾಡುತ್ತಿದ್ದ ಗಾಳಿಪಟ, ನಾವೇ ಟೀಚರ್‌ ಆಗಿ ಬದಲಾಗುತ್ತಿದ್ದ ಕ್ಷಣ. ಇವುಗಳೆಲ್ಲಾ ಅವಿಸ್ಮರಣೀಯ ಕ್ಷಣಗಳು.

ಇಂದು ಎಲ್‌ಕೆಜಿ, ಯುಕೆಜಿ ಎಂದು ಶಿಕ್ಷಣದ ನಿಜವಾದ ಕೆಜಿ (ತೂಕ)ಯ ನಷ್ಟವನ್ನು ಅನುಭವಿಸುತ್ತಿರುವ ಪುಟಾಣಿ ಮಕ್ಕಳು ಮೊಬೈಲ್‌, ವೀಡಿಯೋ ಗೇಮ್‌ಗಳ ನಡುವೆ ಮರೆಯಾಗಿರುವ ಕುಂಟೆಬಿಲ್ಲೆಯನ್ನು ಆಲೋಚಿಸುವಾಗ ಅನ್ನಿಸುತ್ತದೆ, ನಾನು ನಿಜವಾಗಿಯೂ ಅದೃಷ್ಟವಂತ!

Advertisement

 ವಿನಯ್‌ ಆರ್‌. ಭಟ್‌ ತೃತೀಯ ಬಿ.ಕಾಂ.,  ಭುವನೇಂದ್ರ ಕಾಲೇಜು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next