Advertisement

“ರಾಜ್ಯಕ್ಕೆ ಮಾದರಿಯಾಗಿ ಬಾಲವನ ಅಭಿವೃದ್ಧಿ’

09:52 PM Oct 10, 2020 | mahesh |

ಪುತ್ತೂರು: ನಡೆದಾಡುವ ವಿಶ್ವಕೋಶ ಡಾ| ಶಿವರಾಮ ಕಾರಂತ ಅವರ ಕರ್ಮಭೂಮಿ ಬಾಲವನವನ್ನು ರಾಜ್ಯಕ್ಕೆ ಮಾದರಿ ಎಂಬಂತೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಪರ್ಲಡ್ಕ ಬಾಲವನದಲ್ಲಿ ಅ. 10ರಂದು ಡಾ| ಶಿವರಾಮ ಕಾರಂತರ ಜನ್ಮದಿನಾಚರಣೆ ಹಾಗೂ 2020ನೇ ಸಾಲಿನ ಡಾ| ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಾರಂತರಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬಗ್ಗೆ ಕಾಳಜಿ ಇತ್ತು ಅನ್ನುವುದಕ್ಕೆ ಅವರ ಕೃತಿಯಲ್ಲಿನ ವಸ್ತುಗಳೆ ಸಾಕ್ಷಿ ಎಂದ ಅವರು, ಅನುಭವಿಸಿ ಬರೆಯಲು ಸಾಧ್ಯ ಎನ್ನುವುದನ್ನು ನಿರೂಪಿಸಿದವರು ಡಾ| ಕಾರಂತರು ಎಂದು ಹೇಳಿದರು.

ನೇರ ಮಾತುಗಾರಿಕೆ ಕಾರಂತರ ಗುಣ. ತಾನು ಹೇಳ ಬೇಕಾದುದನ್ನು ಹಿಂಜರಿಯದೆ ಹೇಳುವ ಸ್ವಭಾವದ ಕಾರಂತರು ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ ಎಂದು ಸ್ಮರಿಸಿದ ಕೋಟ ಶ್ರೀನಿವಾಸ ಪೂಜಾರಿ, ಬಾಲವನದಲ್ಲಿ ಕಾರಂತರ ನೆನಪು ಚಿರಕಾಲ ಉಳಿಸುವ ನಿಟ್ಟಿನಲ್ಲಿ ಸರಕಾರ ಆದ್ಯತೆ ನೀಡಲಿದೆ ಎಂದರು.

ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ|ಎಚ್‌.ಜಿ. ಶ್ರೀಧರ್‌ ಕಾರಂತರ ಬಗ್ಗೆ ಉಪನ್ಯಾಸ ಮತ್ತು ಅಮೃತ ಸೋಮೇಶ್ವರ ಅವರಿಗೆ ಅಭಿನಂದನ ನುಡಿಗಳನ್ನಾಡಿ, ಕಾರಂತರ ಬಹುಮುಖೀ ವ್ಯಕ್ತಿತ್ವ ಅರಳಲು ಕಾರಣವಾದ ವೃತ್ತಿಭೂಮಿ ಬಾಲವನ ಎಂದ ಅವರು ಕಾರಂತರು ಮತ್ತು ಸೋಮೇಶ್ವರ ಅವರು ಸಮುದ್ರದ ಅಲೆಯಂತೆ ಹೊಸತನಕ್ಕೆ ಹಂಬಲಿಸಿದವರು ಎಂದರು.

ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿ, ಬಾಲವನದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಚಿವರ ಸಹಕಾರದಿಂದ ಸರಕಾರದಿಂದ ಗರಿಷ್ಠ ಅನುದಾನ, ಸೌಲಭ್ಯ ಒದಗಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

Advertisement

ವೇದಿಕೆಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭೆ ಸದಸ್ಯೆ ದೀಕ್ಷಾ ಪೈ, ತಹಶೀಲ್ದಾರ್‌ ರಮೇಶ್‌ ಬಾಬು, ಬಾಲವನ ವಿಶೇಷ ಕರ್ತವ್ಯಾಧಿಕಾರಿ ಡಾ|ಸುಂದರ ಕೇನಾಜೆ ಮೊದಲಾದವರಿದ್ದರು. ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಡಾ|ಯತೀಶ್‌ ಉಳ್ಳಾಲ ಪ್ರಸ್ತಾವನೆಗೈದು ಸ್ವಾಗತಿಸಿದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್‌ ಜಿ. ವಂದಿಸಿದರು.ಬಾಲಕೃಷ್ಣ ಪೊರ್ದಾಳ್‌ ನಿರೂಪಿಸಿದರು. ಕಾರ್ಯಕ್ರಮ ಆರಂಭಕ್ಕೆ ಮೊದಲು ಮತ್ತು ಸಭಾ ಕಾರ್ಯಕ್ರಮಗಳ ಬಳಿಕ ತಾಳಮದ್ದಳೆ ನಡೆಯಿತು.

ಅನಾರೋಗ್ಯದಿಂದ ಅಮೃತ ಸೋಮೇಶ್ವರ ಗೈರು; ಮನೆಯಲ್ಲಿ ಪ್ರಶಸ್ತಿ ಪ್ರದಾನ
2020ನೇ ಸಾಲಿನ ಡಾ| ಶಿವರಾಮ ಕಾರಂತ ಬಾಲವನ ಪ್ರಶಸ್ತಿಗೆ ಆಯ್ಕೆಯಾಗಿದ್ದ ಕನ್ನಡ ಮತ್ತು ತುಳು ಭಾಷಾ ಸಾಹಿತಿ ಪ್ರೊ| ಅಮೃತ ಸೋಮೇಶ್ವರ ಅನಾರೋಗ್ಯದ ಕಾರಣದಿಂದ ಬಾಲವನದ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಬಾಲವನ ಸಮಿತಿ ಪದಾಧಿಕಾರಿಗಳು, ಜನ ಪ್ರತಿನಿಧಿಗಳು ಅವರ ಸೋಮೇಶ್ವರದ ನಿವಾಸಕ್ಕೆ ತೆರಳಿ ಅಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next