ಶ್ರೀರಂಗಪಟ್ಟಣ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬಲಮುರಿ ಹಾಗೂ ಎಡಮುರಿ ಜಲಪಾತಗಳು ಪ್ರವಾಸಿಗರ ಪಾಲಿಗೆ ಮೃತ್ಯುಕೂಪವಾಗುತ್ತಿದೆ. ಸೂಚನಾ ಫಲಕಗಳನ್ನು ಅಳವಡಿಸಿ ಅಪಾಯದ ಮುನ್ಸೂಚನೆ ನೀಡಿದ್ದರೂ ಅದನ್ನು ಲೆಕ್ಕಿಸದೆ ನೀರಿನೊಡನೆ ಸರಸವಾಡಲು ಇಳಿಯುವ ಪ್ರವಾಸಿಗರು ಸಾವನ್ನಪ್ಪುತ್ತಿದ್ದಾರೆ. ಕಳೆದ ನಾಲ್ಕೂವರೆ ತಿಂಗಳಲ್ಲಿ 11 ಮಂದಿ ಸಾವನ್ನಪ್ಪಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಕೆಆರ್‌ಎಸ್ -ಮೈಸೂರು ಮಾರ್ಗ ಮದ್ಯೆ ಇರುವ ಬೆಳಗೊಳ ಗ್ರಾಮದ ಬಳಿಯಿಂದ ಉತ್ತರಕ್ಕೆ ಎರಡೂವರೆ ಕಿ.ಮೀ. ಸಾಗಿದರೆ ಕಾಣುವುದೇ ಬಲಮುರಿ. ಕೆಆರ್‌ಎಸ್ ಕೆಳಭಾಗದಲ್ಲಿನ ರೈತರಿಗೆ ಮೈಸೂರು ರಾಜವಂಶಸ್ಥರು 300 ವರ್ಷಗಳ ಹಿಂದೆಯೇ ಅಣೆಕಟ್ಟು ನಿರ್ಮಾಣ ಮಾಡಿ ಆ ಮೂಲಕ ನಾಲೆಗಳಿಗೆ ನೀರು ಹರಿಸಿ ರೈತರ ಬಾಳು ಬೆಳಕಾಗುವಂತೆ ಮಾಡಿದ್ದರು.
ನೀರಿನ ಆಟದಲ್ಲಿ ಪ್ರಾಣಬಲಿ: ಬಲಮುರಿಯ ಬಳಿಯೇ ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ಚಂದ್ರಾಕಾರದಲ್ಲಿ ಕಟ್ಟೆ ನಿರ್ಮಿಸಿ ನಾಲೆಗೆ ನೀರು ಹರಿಸಲು ಮಾಡಿರುವ ವಿನ್ಯಾಸವೇ ಇಲ್ಲಿನ ಸೌಂದರ್ಯಕ್ಕೆ ಮೆರಗು ತಂದಿದೆ. ಕಟ್ಟೆಯ ಮೇಲಿಂದ ಬಿದ್ದ ನೀರಿನ ವಿಶಾಲ ರಮಣೀಯ ದೃಶ್ಯವನ್ನು ನೋಡಲು ಪ್ರವಾಸಿಗರು ಇಲ್ಲಿಗೆ ಆಗಮಿಸುವರು. ಬಲಮುರಿಯ ಪ್ರಕೃತಿ ಸೊಬಗಿಗೆ ಮಾರುಹೋಗುವ ಪ್ರವಾಸಿಗರು ವೀಕೆಂಡ್‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಇಲ್ಲಿನ ಸೌಂದರ್ಯ ಸವಿಯುತ್ತಿದ್ದಾರೆ.
ಬಲಮುರಿಯ ಸೌಂದರ್ಯವನ್ನಷ್ಟೇ ಸವಿದು ಹೋಗಲು ತಯಾರಿಲ್ಲದ ಪ್ರವಾಸಿಗರು ನೀರಿನೊಳಗೆ ಇಳಿದು ಆಟವಾಡಲು ಹೋಗಿ ನೀರಿನ ಸುಳಿ ಹಾಗೂ ನೀರಿನ ಹೊಂಡಗಳಿರುವುದು ಗೊತ್ತಿಲ್ಲದೆ ಅಪಾಯಕ್ಕೆ ಸಿಲುಕಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಸಿಬ್ಬಂದಿ ಕಣ್ತಪ್ಪಿಸಿ ನೀರಿನಾಟ: ಪೊಲೀಸ್ ಇಲಾಖೆ , ಕಾವೇರಿ ನೀರಾವರಿ ನಿಗಮ ಹಾಗೂ ಸ್ಥಳೀಯ ಬಲಮುರಿ ಸಮಿತಿ ಇದರ ಜೊತೆಗೆ ಪ್ರವಾಸೋದ್ಯಮ ಇಲಾಖೆ ಸೇರಿ ನದಿ ತೀರದ ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಿದೆ. ನದಿ ಬಂಡೆ ಮೇಲೆ ಹೋಗಿ ಪೋಟೋ ತೆಗೆಯಬೇಡಿ, ಇಲ್ಲಿ ಸುಳಿ ಇದೆ. ಆ ಸ್ಥಳಕ್ಕೆ ಹೋಗಬೇಡಿ, ಈ ವರ್ಷ ಇಷ್ಟು ಜನ ಸಾವನ್ನಪ್ಪಿದ್ಧಾರೆ ಎಂದು ವಿವಿಧ ರೀತಿಯ ಫಲಕಗಳನ್ನು ಹಾಕಿದರೂ ಪ್ರವಾಸಿಗರು ಅದನ್ನು ಗಮನಿಸಿಯೂ ಭಯವಿಲ್ಲದೆ ನೀರಿಗಿಳಿಯುತ್ತಾ ಕೊನೆಗೆ ಮೃತ್ಯಕೂಪಕ್ಕೆ ಸಿಲುಕಿ ಪ್ರಾಣ ಬಿಡುತ್ತಿದ್ದಾರೆ. ಪೊಲೀಸರು ಸಹ ಪ್ರವಾಸೋದ್ಯಮ ಇಲಾಖೆಯಿಂದ ಬಲಮುರಿಯಲ್ಲಿ ನೀರಿಗಿಳಿಯುವವರ ಬಗ್ಗೆ ನಿಗಾ ಇಡಲು ಮೂರು-ನಾಲ್ಕು ಸಿಬ್ಬಂದಿ ನೇಮಿಸಿದೆ. ಆದರೂ ಸಿಬ್ಬಂದಿಯ ಕಣ್ತಪ್ಪಿಸಿ ನೀರಿಗಿಳಿಯುವುದು ಕಂಡುಬರುತ್ತಿದೆ.
ಒಂದೇ ದಿನ ಐವರ ಸಾವು: ಈ ವರ್ಷದ ಜನವರಿ 19ರಿಂದ ಇಲ್ಲಿವರೆಗೆ ಬಲಮುರಿ ಹಾಗೂ ಎಡಮುರಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಬಲಮುರಿಯ ಕತ್ತೆಹಳ್ಳದ ಬಳಿಯೇ ಒಂದು ಕುಟುಂಬದ ಐವರು ಸ್ನಾನ ಮಾಡಲು ಹೋಗಿ ಒಬ್ಬರನ್ನು ರಕ್ಷಿಸಲು ಮತ್ತೂಬ್ಬರು ಮುಂದಾಗಿ ಕೊನೆಗೆ 5 ಮಂದಿ ಒಂದೇ ದಿನ ಸಾವನ್ನಪ್ಪಿರುವುದು ದೊಡ್ಡ ದುರಂತವಾಗಿದೆ.
ಮೇ 12ರಂದು ಮೈಸೂರಿನ ಇಬ್ಬರು ಯುವಕರು 18ರಂದು ಹಾಸನ ಯುವಕ ಹೀಗೆ ಪ್ರತಿ ಬಾರಿಯೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಕಡಿವಾಣ ಹಾಕಲು ಎಂದು ಮುಂದಾಗದಿರುವುದು ಸ್ಥಳೀಯರ ಅಸಮಧಾನಕ್ಕೆ ಕಾರಣವಾಗಿದೆ. ಇದೇ ತಿಂಗಳಲ್ಲಿ ವಾರದ ಅಂತರದಲ್ಲಿ ನಾಲ್ವರು ಮೃತಪಟ್ಟಿರುವುದು ಬಲಮುರಿ ಪ್ರವಾಸಿ ತಾಣದ ನಿಸರ್ಗ ಸೌಂದರ್ಯದ ಹಿಂದಿನ ಸಾವಿನ ನಿಗೂಢತೆಗೆ ಸಾಕ್ಷಿಯಾಗಿದೆ.
13 ವರ್ಷದಲ್ಲಿ 105 ಸಾವು: ಕಳೆದ 13 ವರ್ಷದಲ್ಲಿ ಬಲಮುರಿ ವ್ಯಾಪ್ತಿಯಲ್ಲಿ ಒಟ್ಟು 105 ಮಂದಿ ಸಾವನ್ನಪ್ಪಿರುವುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. 2006ರಲ್ಲಿ 05, 2007ರಲ್ಲಿ 09, 2008ರಲ್ಲಿ 09, 2010ರಲ್ಲಿ 08, 2011 ರಲ್ಲಿ 11, 2012ರಲ್ಲಿ 08, 2013ರಲ್ಲಿ 07, 2014ರಲ್ಲಿ 15, 2015ರಲ್ಲಿ 08, 2016ರಲ್ಲಿ 04, 2017ರಲ್ಲಿ 09, 2018ರಲ್ಲಿ 01 ಹಾಗೂ 2019ರ ಜನವರಿಯಿಂದ ಮೇವರೆಗೆ 11 ಮಂದಿ ಸಾವನ್ನಪ್ಪಿದ್ದಾರೆ.
● ಗಂಜಾಂ ಮಂಜು