ಕದ್ರಿ: ಸುಮಾರು ಒಂದು ವರ್ಷದ ಬಳಿಕ ಎರಡು ತಿಂಗಳ ಹಿಂದೆ ಓಡಾಟ ಆರಂಭಿಸಿದ್ದ ಕದ್ರಿ ಪಾರ್ಕ್‌ನ ಬಾಲಮಂಗಳ ಎಕ್ಸ್‌ಪ್ರೆಸ್ ಪುಟಾಣಿ ರೈಲಿಗೆ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ.
ಕದ್ರಿ ಪಾರ್ಕ್‌ಗೆ ಸಾಮಾನ್ಯವಾಗಿ ಶನಿವಾರ ಮತ್ತು ರವಿವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಆದರೆ, ಸದ್ಯ ವಾರಾಂತ್ಯ ಕರ್ಫ್ಯೂ ವಿಧಿಸಿದ ಪರಿಣಾಮ ಪಾರ್ಕ್‌ಗಳು ಸಾರ್ವಜನಿಕರ ಭೇಟಿಗೆ ತೆರೆದಿಲ್ಲ. ಇನ್ನು, ಸೋಮವಾರದಿಂದ ಶುಕ್ರವಾರದವರೆಗೆ ಪಾರ್ಕ್‌ಗೆ ಭೇಟಿ ನೀಡುವವರ ಸಂಖ್ಯೆಯೂ ಕಡಿಮೆ ಇದೆ. ಇದೇ ಕಾರಣಕ್ಕೆ ಪುಟಾಣಿ ರೈಲಿಗೆ ಕಡಿಮೆ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಇದರಿಂದ ನಷ್ಟ ಉಂಟಾಗುತ್ತಿದೆ.
ಬಾಲಮಂಗಳ ಎಕ್ಸ್‌ಪ್ರೆಸ್ ಪುಟಾಣಿ ರೈಲು ಮತ್ತಷ್ಟು ಆಕರ್ಷಿಸಲು ಸದ್ಯದಲ್ಲೇ ಹೊಸ ಎಂಜಿನ್ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಮಳೆಗಾಲ ಸಹಿತ ಕೆಲವೊಂದು ದಿನ ಪುಟಾಣಿ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬರುತ್ತಿತ್ತು. ಸದ್ಯ ಗೇರ್‌ಲೆಸ್ ಇಂಜಿನ್ ಇದ್ದು, ಇದರಿಂದಾಗಿ ರೈಲಿನ ಇಂಜಿನ್ ಸಾಮರ್ಥ್ಯ ಕಡಿಮೆ ಇತ್ತು. ರೈಲಿನ ಹಳಿಯ ಕೆಲವೊಂದು ಕಡೆ ವೇಗ ಕಡಿಮೆ ಇರುತ್ತಿತ್ತು. ಇದರಿಂದ ರೈಲು ಅರ್ಧದಲ್ಲಿಯೇ ನಿಲ್ಲುತ್ತಿತ್ತು. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಗೇರ್ ವ್ಯವಸ್ಥೆ ಹೊಂದಿರುವ ಇಂಜಿನ್ ಬೇಕೆಂದು ಬೇಡಿಕೆ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಹೊಸ ಇಂಜಿನ್ ಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ.