Advertisement
ಮಕ್ಕಳ ಮನೋರಂಜನೆಗೆ ಲಭ್ಯವಾಗಬೇಕಾಗಿದ್ದ ಈ ರೈಲು ಅನ್ನು ಕೆಲವು ತಿಂಗಳಿನಿಂದ ಕೋಣೆಯೊಳಗೆ ಇರಿಸಿ ಬೀಗ ಹಾಕಲಾಗಿದೆ. ಅಧಿಕಾರಿಗಳು ಹೇಳುವ ಪ್ರಕಾರ ಇನ್ನೂ, ಮೂರರಿಂದ ನಾಲ್ಕು ವಾರಗಳ ಕಾಲ ರೈಲು ಓಡಾಟ ನಡೆಸುವುದು ಅನುಮಾನ. ಕದ್ರಿ ಬಾಲಮಂಗಳ ಎಕ್ಸ್‌ಪ್ರೆಸ್ ಪುಟಾಣಿ ರೈಲಿನ ವಾಲ್ ಜತೆಗೆ ಹೈಡ್ರೋಲಿಂಕ್ ಎಂಜಿನ್‌ನಲ್ಲಿ ತೊಂದರೆ ಇದೆ. ಈ ಬಿಡಿಭಾಗಗಳು ಇನ್ನಷ್ಟೇ ಬೆಂಗಳೂರಿನಿಂದ ಬರಬೇಕಿದೆ. ರೈಲು ದುರಸ್ತಿ ಸಂಬಂಧ ಪರಿಶೀಲನೆಗೆಂದು ಸಂಬಂಧಿತ ತಾಂತ್ರಿಕ ಪರಿಣಿತರು ಈಗಾಗಲೇ ಕದ್ರಿಗೆ ಆಗಮಿಸಿದ್ದಾರೆ. ದುರಸ್ತಿಗೆ ಹಣ ಬಿಡುಗಡೆ ಮಾಡಲು ಕೊಟೇಶನ್ ಹಾಕಲಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಷಯ ಕಮಿಟಿಗೆ ಬರಲಿದೆ. ಹಣ ಬಿಡುಗಡೆಯಾದ ಬಳಿಕವಷ್ಟೇ ದುರಸ್ತಿ ನಡೆಯಲಿದೆ. ಈ ಸಮಯಕ್ಕಾಗಲೇ ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಮುಗಿದು ಶಾಲೆ ಪ್ರಾರಂಭವಾಗುತ್ತದೆ.
ಕಳೆದ ವರ್ಷ ಜನವರಿ 7ರಂದು ನೂತನ ರೈಲಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ರೈಲು ಮತ್ತು ಟ್ರ್ಯಾಕ್ ಕಾಮಗಾರಿ ಸಂಪೂರ್ಣಗೊಂಡರೂ ಕೆಲವು ತಿಂಗಳು ರೈಲು ಓಡಾಟ ನಡೆಸಲಿಲ್ಲ. ಕೊನೆಗೆ ಪ್ರಾಯೋಗಿಕ ಸಂಚಾರ ಆರಂಭಿಸಿದರೂ, ಅಧಿಕೃತವಾಗಿ ಸಂಚರಿಸಿದ್ದು ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ. ಕೆಲವು ತಿಂಗಳು ಸುಗಮವಾಗಿ ರೈಲು ಸಂಚರಿಸಿದರೂ ಪಾರ್ಕ್‌ನ ಉತ್ತರ ಭಾಗದಲ್ಲಿ ಹಾದು ಹೋಗುವ ರೈಲು ಹಳಿಯ ಬಳಿಯಲ್ಲಿರುವ 4 ಬಾಟಲ್ ಪಾಮ್ ಮರ (ಅಲಂಕಾರಿಕ ಮರ)ಗಳು ಮಕ್ಕಳ ಕೈಗೆ ತಾಗುತ್ತಿದ್ದ ಪರಿಣಾಮ ರೈಲು ಓಡಾಟ ನಿಲುಗಡೆಗೊಳಿಸಲಾಗಿತ್ತು. ಬಳಿಕ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಮರ ಕಡಿದು, ರೈಲು ಸಂಚಾರ ಆರಂಭಗೊಂಡಿತ್ತು. ಇದೀಗ ರೈಲಿನಲ್ಲಿ ತಾಂತ್ರಿಕ ತೊಂದರೆ ಇದೆ ಎಂದು ಕೆಲವು ತಿಂಗಳಿಂದ ಓಡಾಟ ನಿಲ್ಲಿಸಿದೆ. ಸದ್ಯದಲ್ಲಿಯೇ ದುರಸ್ತಿ ಕಾರ್ಯ
ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಕದ್ರಿಯಲ್ಲಿನ ಬಾಲಮಂಗಳ ಎಕ್ಸ್‌ಪ್ರೆಸ್ ಪುಟಾಣಿ ರೈಲು ಸಂಚಾರ ನಿಲ್ಲಸಿಸಲಾಗಿದೆ. ಈಗಾಗಲೇ ತಾಂತ್ರಿಕ ಪರಿಣಿತರು ಆಗಮಿಸಿ ಪರಿಶೀಲಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿಯೇ ದುರಸ್ತಿ ನಡೆಸಲಾಗುವುದು.
- ಉಸ್ಮಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ (ಪ್ರಭಾರ)