ಇಸ್ಲಾಮಾಬಾದ್: ಪಾಕಿಸ್ತಾನದ ಬಾಲಾಕೋಟ್ ನಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಭಾರತೀಯ ವಾಯುಪಡೆ (ಐಎಎಫ್) ಸರ್ಜಿಕಲ್ ದಾಳಿ ನಡೆಸಿ ಧ್ವಂಸಗೊಳಿಸಿದ 18 ತಿಂಗಳ ಬಳಿಕ ಪಾಕಿಸ್ತಾನದ ಕುಖ್ಯಾತ ಗುಪ್ತಚರ ಸಂಸ್ಥೆ ಐಎಸ್ ಐ ಬಾಲಾಕೋಟ್ ನಲ್ಲಿ ಮತ್ತೆ ಶಿಬಿರ ನಿರ್ಮಿಸಿ ಜೈಶ್ ಎ ಮೊಹಮ್ಮದ್ ಕಮಾಂಡರ್ ಗಳ ಜತೆ ಉಗ್ರರಿಗೆ ತರಬೇತಿ ಕೊಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆ ಅನುಭವ ಹೊಂದಿರುವ ಉಗ್ರರನ್ನು ಬಾಲಾಕೋಟ್ ಗೆ ಕರೆತಂದು ಭಾರತದ ಮೇಲೆ ದಾಳಿ ನಡೆಸುವ ಗುರಿಯೊಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ವರದಿ ಹೇಳಿದೆ.
ಗುಪ್ತಚರ ಇಲಾಖೆಯ ಮೂಲಗಳ ಪ್ರಕಾರದ ವರದಿಯಂತೆ, ಜೈಶ್ ಎ ಮೊಹಮ್ಮದ್ (ಜೆಇಎಂ) ಉಗ್ರಗಾಮಿ ಸಂಘಟನೆಯ ಕಮಾಂಡರ್ ಜುಬೇರ್ ನೇತೃತ್ವದಲ್ಲಿ ಬಾಲಾಕೋಟ್ ಜೆಇಎಂ ಶಿಬಿರಗಳಲ್ಲಿ ನೂತನವಾಗಿ ಆಯ್ಕೆಮಾಡಿಕೊಂಡ ಉಗ್ರರಿಗೆ ತರಬೇತಿ ನೀಡುವ ಜವಾಬ್ದಾರಿ ವಹಿಸಲಾಗಿದೆ. ಜುಬೇರ್ ಅಫ್ಘಾನಿಸ್ತಾನದಲ್ಲಿ ನ್ಯಾಟೋ ಪಡೆ ವಿರುದ್ಧ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಲಾಕ್ ಡೌನ್ ವೇಳೆ ಕಾರ್ಮಿಕರ ಪಾಡನ್ನು ಹಾಡಿನ ರೂಪದಲ್ಲಿ ಬರೆದು “RAPPER” ಆದ ಯುವಕ
ಬಾಲಾಕೋಟ್ ಕ್ಯಾಂಪ್ ನಲ್ಲಿ ನೂತನವಾಗಿ ನಿರ್ಮಿಸಿರುವ ನಿಯಂತ್ರಣ ಕೊಠಡಿ(ಕಂಟ್ರೋಲ್ ರೂಂ) ಕಾರ್ಯಾಚರಿಸುತ್ತಿರುವುದು ಪತ್ತೆಯಾಗಿದೆ. ಈ ಕಂಟ್ರೋಲ್ ರೂಂ ಅನ್ನು ಜೆಇಎಂ ಮತ್ತು ಇತರ ಭಯೋತ್ಪಾದಕ ಸಂಘಟನೆಗಳು ಭಾರತದೊಳಕ್ಕೆ ನುಸುಳಲು ನೆರವು ನೀಡಲು ಬಳಕೆ ಮಾಡುತ್ತಿರುವುದಾಗಿ ವರದಿ ವಿವರಿಸಿದೆ.
ಈ ರೀತಿ ನುಸುಳಿ ಬಂದ ಉಗ್ರರಿಗೆ ಪಾಕಿಸ್ತಾನದಲ್ಲಿರುವ ಉಗ್ರರ ಕಮಾಂಡರ್ ಗಳು ನಿರಂತರವಾಗಿ ಕೋಡ್ ವರ್ಡ್ ಗಳ ಮೂಲಕ ಸೂಚನೆ ನೀಡುತ್ತಿರುತ್ತಾರೆ. ಅಕ್ಟೋಬರ್ ನಲ್ಲಿ ರಾಜಸ್ಥಾನದಲ್ಲಿರುವ ಸೇನಾ ನೆಲೆ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿರುವುದು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.