ಹೊಸದಿಲ್ಲಿ : ಬಾಲಾಕೋಟ್ ಮೇಲಿನ ಐಎಎಫ್ ಬಾಂಬ್ ದಾಳಿಯ ಬಳಿಕದಲ್ಲಿ ಪಾಕ್ ಮೂಲದ ಉಗ್ರರು ಭಾರತದೊಳಗೆ ನುಸುಳಿ ಬರುವ ಪ್ರಮಾಣ ಶೇ.45ರಷ್ಟು ಕಡಿಮೆಯಾಗಿದೆ.
ದೇಶದ ಗಡಿ ಭದ್ರತೆ ಕುರಿತ ಈ ವಿಷಯವನ್ನು ಇಂದು ಮಂಗಳವಾರ ಸರಕಾರ ಸಂಸತ್ತಿಗೆ ತಿಳಿಸಿತು.
ಭದ್ರತಾ ಪಡೆಗಳ ಸಂಘಟಿತ ಯತ್ನಗಳ ಫಲವಾಗಿ ಜಮ್ಮು ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿಯು 2019ರ ಮೊದಲರ್ಧದಲ್ಲಿ ಸಾಕಷ್ಟು ಸುಧಾರಿಸಿದೆ ಎಂದು ಗೃಹ ಸಚಿವಾಲಯ ಸದನಕ್ಕೆ ತಿಳಿಸಿತು.
ಇದೇ ವೇಳೆ ಪಾಕಿಸ್ಥಾನ ಕೂಡ ತನ್ನ ಗಡಿಯಲ್ಲಿ ಕಟ್ಟೆಚ್ಚರವನ್ನು ತೀವ್ರಗೊಳಿಸಿದ್ದು ಭಾರತೀಯ ಪಡೆಗಳು ತನ್ನ ಮೇಲೆ ದೊಡ್ಡ ಮಟ್ಟ ದಾಳಿ ಸದ್ಯೋ ಭವಿಷ್ಯದಲ್ಲೇ ನಡೆಸಿತು ಎಂಬ ಭೀತಿಯಲ್ಲಿ ತನ್ನ ಸೇನಾ ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ ಎಂಬ ಗುಪ್ತಚರ ಮಾಹಿತಿಗಳು ಲಭಿಸಿರುವುದಾಗಿ ಗೃಹ ಸಚಿವಾಲಯ ಹೇಳಿತು.
ಸದನದಲ್ಲಿ ಮಾತನಾಡಿದ ಕೇಂದ್ರ ಗೃಹ ಸಹಾಯಕ ಸಚಿವ ನಿತ್ಯಾನಂದ ರಾಯ್ ಅವರು, ಸರಕಾರವು ಗಡಿಯಾಚೆಗಿನ ಉಗ್ರರ ಒಳನುಸುಳುವಿಕೆ ಬಗ್ಗೆ ಶೂನ್ಯ ಸಹನೆಯ ನೀತಿ ಹೊಂದಿದೆ. ಅಂತೆಯೇ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸಿರುವ ಸಂಯುಕ್ತ ವಿಚಕ್ಷಣೆಯ ಫಲವಾಗಿ ಉಗ್ರರ ಒಳ ನುಸುಳುವಿಕೆ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಹೇಳಿದರು.