ಹನುಮೇಶ ಕಮ್ಮಾರ
ಬಳಗಾನೂರು: ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿನ ರೈತರು ಭತ್ತ ಕಟಾವಿನಲ್ಲಿ ನಿರತರಾಗಿದ್ದು, ಈ ಬಾರಿ ಭತ್ತದ ಇಳುವರಿ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಅನ್ನದಾತರು ನಷ್ಟದ ಭೀತಿಯಲ್ಲಿದ್ದಾರೆ. ಈ ಮಧ್ಯ ಮಾರುಕಟ್ಟೆಯಲ್ಲಿ ಭತ್ತಕ್ಕೆ ಸಮರ್ಪಕ ಬೆಲೆ ಸಿಗದಂತಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೈತರು ಸಸಿ ಮಡಿ ಹಾಕುವಾಗಿನಿಂದ ಭತ್ತ ನಾಟಿಗಾಗಿ ಈಗಾಗಲೆ ಸುಮಾರು ಎಕರೆಗೆ 35-45 ಸಾವಿರವರೆಗೆ ಖರ್ಚು ಮಾಡಿದ್ದು, ಇದೀಗ ಮಾಡಿದ ಖರ್ಚಿನಷ್ಟು ಬೆಳೆ ಬರುತ್ತದೆಯೋ-ಇಲ್ಲವೋ ಎನ್ನುವ ಚಿಂತೆ ಎದುರಾಗಿದೆ.
ನಷ್ಟಕ್ಕೆ ಕಾರಣವೇನು?: ಮುಂಕಟ್ಟು ನಾಟಿ ಮಾಡಿದ ರೈತರಿಗೆ ಹದಿನೈದು ದಿನಗಳ ಹಿಂದೆ ಹವಾಮಾನ ಬದಲಾವಣೆ ಮತ್ತು ಅಕಾಲಿಕ ಮಳೆ, ಶೀತ ಗಾಳಿಗೆ ಭತ್ತ ನೆಲಕ್ಕುಳಿದ್ದು, ಬೆಳೆ ನಷ್ಟವಾಗಿದೆ. ಜೊತೆಗೆ ಬೆಳೆಗೆ ದುಬಾರಿ ರಸಗೊಬ್ಬರ, ಕ್ರಿಮಿನಾಶಕ, ಕಳೆ ತೆಗೆಯಲು ಕೂಲಿ ಹೆಚ್ಚಳ, ಭತ್ತ ಕಟಾವಿಗೆ ಬಾಡಿಗೆ ಯಂತ್ರ ಬಳಕೆ ಅನಿವಾರ್ಯವಾಗಿರುವುದರಿಂದ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಇದರಿಂದ ಭತ್ತ ಸ್ಥಿರ ಬೆಲೆ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಖರೀದಿಸುವ ವರ್ತಕರು ಭತ್ತ ಖರೀದಿಗೆ ಮುಂದಾಗದಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.
ತಡವಾಗಿ ಭತ್ತ ನಾಟಿ ಮಾಡಿದ ರೈತರಿಗೆ ಮೋಡ ಕವಿದ ವಾತಾವರಣದಿಂದ ಬೆಳೆಗಳು ತೆನೆ ಬಿಚ್ಚಿ ಸಂತಸ ತಂದಿದೆಯಾದರೂ ಕಡಿಮೆ ಇಳುವರಿ ಬರುವ ಸಾಧ್ಯತೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾಗಶಃ ರೈತರು ಬೆಳೆಯಲ್ಲಿ ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ.
ತುಂಗಭದ್ರಾ ಎಡದಂಡೆ ನಾಲೆಗೆ ಎರಡನೇ ಬೆಳೆಗೆ ನೀರು ಬಿಡುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಭತ್ತ ಕಟಾವು ಮಾಡುವ ಆತುರದಲ್ಲಿ ರೈತರಿದ್ದಾರೆ. ಮುಂದಿನ ಬೆಳೆ ನಾಟಿಗಾಗಿ ಗದ್ದೆಗಳನ್ನು ಸಿದ್ಧಪಡಿಸುವ ಆತುರಕ್ಕಾಗಿ ರೈತರು ಭತ್ತ ಕಟಾವು ಮಾಡುತ್ತಿದ್ದಾರೆ. ಆದರೆ ಸಕಾಲದಲ್ಲಿ ಭತ್ತ ಕಟಾವು ಯಂತ್ರ ಸಿಗುತ್ತಿಲ್ಲ.
ಬಲವಂತರಾಯಗೌಡ
ಪೊಲೀಸ್‌ಪಾಟೀಲ್, ರೈತ
ಸರಕಾರ ರೈತರ ಅನುಕೂಲಕ್ಕಾಗಿ ಸಮೀಪದ ತಾಲೂಕು, ನಗರ, ಪಟ್ಟಣ ಕೇಂದ್ರಗಳಲ್ಲಿ ಭತ್ತ ಖರೀದಿ ಕೇಂದ ತೆರೆಯಬೇಕು. ಭತ್ತಕ್ಕೆ ಬೆಂಬಲ ಬೆಲೆ ನೀಡಲು ಮುಂದಾಗಬೇಕು. ಕ್ವಿಂಟಲ್ ಭತ್ತಕ್ಕೆ 2500-2800 ವರೆಗೂ ಬೆಂಬಲ ಬೆಲೆ ನಿಗದಿಯಾಗಬೇಕು.
ಬಸನಗೌಡ ಬಳಗಾನೂರ
ರೈತ ಸಂಘದ ಮಸ್ಕಿ ತಾಲೂಕು ಗೌರವಾಧ್ಯಕ್ಷ