ಬಳಗಾನೂರು: ಪಟ್ಟಣದ ಶ್ರೀ ಬಸವೇಶ್ವರ ವೃತ್ತದ ಬಳಿ ಪಟ್ಟಣ ಪಂಚಾಯಿತಿ ಕಟ್ಟಡವೊಂದರಲ್ಲಿ ನಡೆಯುತ್ತಿರುವ ಗ್ರಂಥಾಲಯ ಸ್ವಂತ ಕಟ್ಟಡ, ಜಾಗೆ,
ಗಾಳಿ-ಬೆಳಕಿನ ಕೊರತೆ ಎದುರಿಸುತ್ತಿದೆ.
ಹೀಗಾಗಿ ಗ್ರಂಥಾಲಯಕ್ಕೆ ಒದುಗರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಬಳಗಾನೂರು ಮಂಡಲ ಪಂಚಾಯಿತಿ, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಈ ಮೂರು ಆಡಳಿತದಲ್ಲಿ ಇಲ್ಲಿನ ಗ್ರಂಥಾಲಯ ಅಭಿವೃದ್ಧಿಯಿಂದ ವಂಚಿತಗೊಂಡಿದೆ.
1989ರಲ್ಲಿ ಬಳಗಾನೂರಲ್ಲಿ ಮಂಡಲ ಪಂಚಾಯಿತಿ ಆಡಳಿತವಿತ್ತು. ನಂತರ ಗ್ರಾಮ ಪಂಚಾಯಿತಿಯಾಗಿತ್ತು. ಸುಮಾರು 20 ವರ್ಷ ಗ್ರಾಮ ಪಂಚಾಯಿತಿ ಆಡಳಿತವಿತ್ತು. ಈಗ ಕಳೆದ ಮೂರು ವರ್ಷಗಳಿಂದ ಪಟ್ಟಣ ಪಂಚಾಯಿತಿಯಾಗಿ ಬಡ್ತಿ ಪಡೆದಿದೆ. ಆದರೂ ಗ್ರಂಥಾಲಯ ಮಂಡಲ ಪಂಚಾಯಿತಿ ಅವಧಿಯಲ್ಲಿದ್ದಂತೆಯೇ ಇದೆ. 2011-12ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ಆಡಳಿತಾವಧಿಯಲ್ಲಿ ರಾಜ್ಯವಲಯ ಯೋಜನೆಯಡಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ರೂ. ಬಿಡುಗಡೆ ಆಗಿದೆ. ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದರೂ ಗ್ರಂಥಾಲಯಕ್ಕೆ ಸ್ಥಳ ಒದಗಿಸಿ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆ ಅ ಧಿಕಾರಿಗಳಾಗಲಿ, ಸ್ಥಳೀಯ ಪಪಂ ಆಡಳಿತವಾಗಲಿ ಮುಂದಾಗಿಲ್ಲ.
ಗ್ರಾಂಥಾಲಯದಲ್ಲಿ ಈಗ ಸುಮಾರು 3 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಮೂರು ದಿನಪತ್ರಿಕೆಗಳು, 2 ವಾರ ಪತ್ರಿಕೆ, 2 ಮಾಸಪತ್ರಿಕೆಗಳು ಇಲ್ಲಿಗೆ ಬರುತ್ತಿವೆ. ಆದರೆ ಇನ್ನೂ ಹೆಚ್ಚಿನ ಪುಸ್ತಕ ಮತ್ತು ಇತರೆ ಪತ್ರಿಕೆಗಳನ್ನು ಒದಗಿಸಲು ಅನುದಾನ ಬಿಡುಗಡೆ ಆಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿವೆ.
ಗ್ರಂಥಪಾಲಕರ ವೇತನ: ಗ್ರಂಥಾಲಯ ಆರಂಭ ವಾದಾಗ ಗ್ರಂಥಪಾಲಕನಿಗೆ ತಿಂಗಳಿಗೆ 300 ರೂ. ಸಂಬಳವಿತ್ತು. ಈಗ ತಿಂಗಳಿಗೆ ಸುಮಾರು 7 ಸಾವಿರ ರೂ. ಆಗಿದೆ. ಅದೂ ಮೂರು ತಿಂಗಳಿಗೊಮ್ಮೆ ಬಿಡುಗಡೆ ಆಗುತ್ತಿದೆ. 2013ರಿಂದ ಸರಕಾರ ಕನಿಷ್ಠ ವೇತನ 13,300 ನೀಡಲು ಆದೇಶಿಸಿತ್ತು. ಆದರೆ ಈ ವೇತನ ಪಡೆಯಲು ಗ್ರಂಥಪಾಲಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಕೊರತೆ: ಬಳಗಾನೂರು ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಈಗಿರುವ ಕಟ್ಟಡದಲ್ಲಿ ಜಾಗೆ, ಗಾಳಿ, ಬೆಳಕಿನ ಕೊರತೆ ಇದೆ. ಗ್ರಂಥಾಲಯ ನಿರ್ವಹಣೆಗೆ ಅನುದಾನ ಕೊರತೆ ಕಾಡುತ್ತಿದೆ. ಕೇಂದ್ರ ಗ್ರಂಥಾಲಯ ನಿರ್ದೇಶಕರು, ಉಪನಿರ್ದೇಶಕರು ಹಾಗೂ ಸ್ಥಳೀಯ ಪಪಂ ಆಡಳಿತ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಸ್ಥಳ ಒದಗಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು. ಓದುಗರನ್ನು ಆಕರ್ಷಿಸಲು ಯೋಜನೆ ರೂಪಿಸ ಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.