Advertisement

ಬರಿದಾದ ಹಿರೇಹಳ್ಳದ ಒಡಲು

10:48 AM Apr 05, 2019 | Naveen |

ಬಳಗಾನೂರು: ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಳ ಜನರ ಜೀವನಾಡಿಯಾದ ಹಿರೇಹಳ್ಳ ಬತ್ತಿ ಬರಿದಾಗಿದ್ದು ಜನ, ಜಾನುವಾರುಗಳು ಜೀವಜಲಕ್ಕಾಗಿ ಪರದಾಡುವಂತಾಗಿದೆ.

Advertisement

ಹಿರೇಹಳ್ಳದ ಒಡಲು ಬರಿದಾಗಿ ಈಗಾಗಲೇ ಎರಡ್ಮೂರು ತಿಂಗಳಾಗಿದೆ. ಬಳಗಾನೂರು ಸೇರಿ ಹಳ್ಳದ ದಂಡೆಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ತುಂಗಭದ್ರಾ ಎಡದಂಡೆ ನಾಲೆಯಿಂದ ಮಸ್ಕಿ ಹತ್ತಿರದ ಎಸ್ಕೇಪ್‌ ಗೇಟ್‌ ಮೂಲಕ ಬಳಗಾನೂರು ಹಿರೇಹಳ್ಳಕ್ಕೆ ನೀರು ಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಾಯಚೂರು ಜಿಲ್ಲೆಯ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಹರಿಸಲಾಗುತ್ತಿದೆ. ಮಸ್ಕಿ ಹತ್ತಿರದ ಎಸ್ಕೇಪ್‌ ಗೇಟ್‌ ಮುಖಾಂತರ ಬಳಗಾನೂರು ಹಿರೇಹಳ್ಳಕ್ಕೆ ನೀರು ಹರಿಸಿದಲ್ಲಿ ಬಳಗಾನೂರು ಸೇರಿ ಉದ್ಬಾಳ, ದುರ್ಗಾಕ್ಯಾಂಪ್‌, ಸುಂಕನೂರು, ಕಡಬೂರು, ಕ್ಯಾತನಹಟ್ಟಿ, ಹುಲ್ಲೂರು, ಗೌಡನಬಾವಿ, ಬೆಳ್ಳಿಗನೂರು, ಬುದ್ದಿನ್ನಿ, ಸಾಗರಕ್ಯಾಂಪ್‌, ಉಟಕನೂರು, ಮಲ್ಕಾಪುರ ಬಿ.ಉದ್ಬಾಳ, ಧೋತರಬಂಡಿ, ತಡಕಲ್‌, ಜೀನೂರು, ರಾಮತ್ನಾಳ, ಜಾಲವಾಡ್ಗಿ, ದಿದ್ಗಿ, ಬನ್ನಿಗನೂರು ಸೇರಿ ಹಳ್ಳಕ್ಕೆ ನೀರು ಹರಿಸುವುದರಿಂದ ಮಸ್ಕಿ, ಸಿಂಧನೂರು ಹಾಗೂ ಮಾನ್ವಿ ತಾಲೂಕಿನ ಹಲವಾರು ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನೀಗುತ್ತದೆ.

ಕಲುಷಿತ ನೀರು ಪೂರೈಕೆ: ಹಳ್ಳ ಬರಿದಾಗಿದ್ದರಿಂದ ಅಂತರ್ಜಲ ಕುಸಿದು ಹಳ್ಳದ ದಡದಲ್ಲಿನ ಶಾಲಾ ಬೋರ್‌ವೆಲ್‌ಗ‌ಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ನೀರು ಪೂರೈಕೆಗೆ ವ್ಯತ್ಯೆಯವಾಗುತ್ತಿದೆ. 4-5 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಹಳ್ಳ ಬರಿದಾಗಿದ್ದು, ಶಾಲಾ ಬೋರ್‌ ವೆಲ್‌ಗ‌ಳು ಭೂಮಿಯ ಮೇಲ್ಮಟ್ಟದಲ್ಲಿನ ಕಲುಷಿತ ನೀರು ಹೀರಿಕೊಳ್ಳುತ್ತಿದೆ. ಈ ಅಂತಹ ನೀರು ಬಳಕೆ ಮಾಡುವುದರಿಂದ ಜನರಲ್ಲಿ ಸಾಂಕ್ರಾಮಿಕ ರೋಗಗಳ ಜತೆಗೆ ತುರಿಕೆ, ಅಲರ್ಜಿಯಂತಹ ವಿಚಿತ್ರ ಕಾಯಿಲೆ ಕಾಣಿಸಿಕೊಳ್ಳುತ್ತಿವೆ. ಹಳ್ಳಕ್ಕೆ ನೀರು ಹರಿಸಿದಲ್ಲಿ ಅಂತರ್ಜಲ ಹೆಚ್ಚಿ ಕೊಳವೆಬಾವಿಗಳಿಗೆ ಜೀವ ಬರುತ್ತದೆ. ಆದ್ದರಿಂದ ಅಧಿಕಾರಿಗಳು ಹಿರೇಹಳ್ಳಕ್ಕೆ ನೀರು ಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಾರಾಯಣ ನಗರ ಕ್ಯಾಂಪ್‌ ಜನತೆಗೆ ನೀರು ಒದಗಿಸುವುದಕ್ಕಾಗಿ ಮೂರು ಕೆರೆಗಳನ್ನು ಭರ್ತಿ ಮಾಡಲು 65ನೇ ಉಪಕಾಲುವೆ ಮೂಲಕ ಹಾಗೂ ಪಟ್ಟಣದ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ತುಂಗಭದ್ರ ಎಡದಂಡೆ ನಾಲೆ ಮಸ್ಕಿ ಹತ್ತಿರದ ಎಸ್ಕೇಪ್‌ ಗೇಟ್‌ ಹಿರೇಹಳ್ಳಕ್ಕೆ ನೀರು ಹರಿಸಲು ಜಿಲ್ಲಾಧಿಕಾರಿಗಳಿಗೆ, ಇತರೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ನೀರು ಹರಿಸುವ ಭರವಸೆ ನೀಡಿದ್ದಾರೆ.
. ಫಕ್ರುದ್ದೀನಸಾಬ್‌,
ಪಪಂ ಮುಖ್ಯಾಧಿಕಾರಿ

Advertisement

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸುಮಾರು 35 ಹಳ್ಳಿಗಳಲ್ಲಿ 20ಕ್ಕೂ ಹೆಚ್ಚಿನ ಹಳ್ಳಿಗಳ ಜನತೆ ಹಿರೇಹಳ್ಳದ ದಡದಲ್ಲಿ ಹಾಕಿದ ಕೊಳವೆಬಾವಿ ನೀರನ್ನು ಅವಲಂಬಿಸಿದ್ದಾರೆ. ಇಲ್ಲಿ ಹಾಕಲಾದ ಬೋರ್‌ವೆಲ್‌ಗ‌ಳಿಂದ ಬಂದ ಕಲುಷಿತ ನೀರು ಬಳಸುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಜೊತೆಗೆ ಅಲರ್ಜಿಯಂತಹ ರೋಗಗಳು ಜನರಲ್ಲಿ ಕಂಡು ಬರುತ್ತಿವೆ.
. ಡಾ| ಮೌನೇಶ ಪೂಜಾರ,
ಬಳಗಾನೂರು ಪ್ರಾಥಮಿಕ ಆರೋಗ್ಯ
ಕೇಂದ್ರದ ವೈದ್ಯಾಧಿಕಾರಿ

„ಹನುಮೇಶ ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next