ಬಳಗಾನೂರು: ಪಟ್ಟಣದ ಪೊಲೀಸ್ ಠಾಣೆ ಎದುರಿಗೆ ಇರುವ ಮಸ್ಕಿ ಮುಖ್ಯ ರಸ್ತೆಯಲ್ಲಿನ ಜೋಡಿ ವಿದ್ಯುತ್ ಪರಿವರ್ತಕಗಳಿದ್ದು, ಇದರ ಮರೆಯಲ್ಲೇ ಪುರುಷರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅಪಾಯ ಸಂಭವಿಸುವ ಮುನ್ನ ಇವುಗಳನ್ನು ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆ ಎದುರಿಗೆ ಬಸ್ ತಂಗುದಾಣವಿದ್ದು, ಇದರ ಪಕ್ಕದೇ ವಿದ್ಯುತ್ ಜೋಡಿ ವಿದ್ಯುತ್ ಪರಿವರ್ತಕಗಳಿವೆ. ಈ ಭಾಗದಲ್ಲಿ ಮೂತ್ರಾಲಯ ಇಲ್ಲದ್ದರಿಂದ ಪುರುಷರು ವಿದ್ಯುತ್ ಪರಿವರ್ತಕ ಮರೆಯಲ್ಲಿಯೇ ಮೂತ್ರ ವಿಸರ್ಜಿಸುತ್ತಾರೆ. ಇಲ್ಲಿ ಸುತ್ತಲಿನ ನಿವಾಸಿಗಳು, ಅಂಗಡಿಕಾರರು ತ್ಯಾಜ್ಯ ಎಸೆಯುತ್ತಿದ್ದು ರಸ್ತೆ ತಿಪ್ಪೆಗುಂಡಿಯಂತಾಗಿದೆ. ಪುರುಷರು ವಿದ್ಯುತ್ ಪರಿವರ್ತಕ ಕಂಬಗಳ ಮರೆಯಲ್ಲಿ ಮೂತ್ರ ವಿಸರ್ಜಿಸುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ಮತ್ತು ತಂಗುದಾಣದಲ್ಲಿ ನಿಲ್ಲುವ ಮಹಿಳೆಯರು, ವಿದ್ಯಾರ್ಥಿನಿಯುರು ಮುಜುಗರ ಎದುರಿಸುವಂತಾಗಿದೆ.
ವಿದ್ಯುತ್ ಪರಿವರ್ತಕಗಳಿಗೆ ಸೂತ್ತಲೂ ತಂತಿ ಬೇಲಿ ಸಹ ಇಲ್ಲ. ಇದನ್ನು ಲೆಕ್ಕಿಸದೇ ಪುರುಷರು ಟಿಸಿಗಳ ಮರೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದ್ದರಿಂದ ಅಪಾಯ ಸಂಭವಿಸುವ ಮುನ್ನವೇ ಈ ವಿದ್ಯುತ್ ಪರಿವರ್ತಕಗಳನ್ನು ಸ್ಥಳಾಂತರಿಸುವಂತೆ ಹಲವು ಬಾರಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಪಪಂ ಸದಸ್ಯ ಮಂಜುನಾಥ ಕರಡಕಲ್ ಆರೋಪಿಸಿದ್ದಾರೆ.
ಇನ್ನಾದರೂ ಈ ಪರಿವರ್ತಕಗಳನ್ನು ಸ್ಥಳಾಂತರಿಸುವ ಜೊತೆಗೆ ಸ್ವತ್ಛತೆ ಕಾಪಾಡಲು ಮತ್ತು ಮೂತ್ರಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿದ್ಯುತ್ ಪರಿವರ್ತಕಗಳಿಂದ ಸುತ್ತಲಿನ ವಾರ್ಡ್‌ಗಳಿಗೆ ಸಂಪರ್ಕ ಒದಗಿಸಲಾಗಿದೆ. ಈ ಪರಿವರ್ತಕಗಳನ್ನು ಸ್ಥಳಾಂತರಿಸಲು ಸ್ಥಳ ಒದಗಿಸಿದರೆ ಶೀಘ್ರ ಸ್ಥಳಾಂತರಿಸಲಾಗುವುದು. ಅಲ್ಲದೆ ಕೆಲ ವಾರ್ಡ್‌ಗಳಲ್ಲಿ ಇಲಾಖೆಯಡಿ ಕೈಗೊಂಡ ಕಾಮಗಾರಿಗೆ ಅಡಚಣೆಯಾಗುತ್ತಿದೆ. ಸಾರ್ವಜನಿಕರು, ಪಪಂ ಅಧಿಕಾರಿಗಳು ಸಹಕಾರ ನೀಡಬೇಕು.
. ಶ್ರೀಶೈಲ ಪಾಟೀಲ, ಜೆಸ್ಕಾಂ ಶಾಖಾ ಅಧಿಕಾರಿ