ಬಳಗಾನೂರು: ಬಳಗಾನೂರು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ಮೊದಲ ಅವಧಿ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರಾವಧಿ ಮುಗಿದು ವರ್ಷ ಕಳೆದಿದೆ. ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಇದೀಗ ಪ್ರಕಟಗೊಂಡಿದೆ.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ-ಎ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ. ಆದರೆ ಪರಿಶಿಷ್ಟ ಪಂಗಡ ಮಹಿಳಾ ಸದಸ್ಯೆಯರೇ ಇಲ್ಲ ಇದು ಗೊಂದಲಕ್ಕೆಡೆ ಮಾಡಿದೆ.
ಪರಿಶಿಷ್ಟ ಪಂಗಡದ ಪುರುಷ ಸದಸ್ಯರಿದ್ದಾರೆ. ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಗೊಂದಲದ ನಡುವೆಯೂ ಪಟ್ಟಣ ಪಂಚಾಯಿತಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪೈಪೋಟಿ ಶುರುವಾಗಿದೆ. ಒಂದು ವೇಳೆ ಪಟ್ಟಣ ಪಂಚಾಯಿತಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆದರೆ ಕೇವಲ ಅಧ್ಯಕ್ಷ ಸ್ಥಾನ ಮಾತ್ರ ಭರ್ತಿ ಆಗಿ ಉಪಾಧ್ಯಕ್ಷ ಸ್ಥಾನ ಖಾಲಿ ಉಳಿಯಲಿದೆಯೋ ಅಥವಾ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಪರಿಷ್ಕರಿಸಿದ ನಂತರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುವುದೋ ಎಂಬ ಗೊಂದಲ ಸಾರ್ವಜನಿಕರಲ್ಲಿದೆ.
ಬಳಗಾನೂರು ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 12 ಜನ ಸದಸ್ಯರಿದ್ದಾರೆ. ಈ ಮೊದಲು ಪಕ್ಷೇತರ ಎನ್ನುತ್ತಿದ್ದ ಓರ್ವ ಸದಸ್ಯ ಸೇರಿ, ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಮಸ್ಕಿ ಕ್ಷೇತ್ರದ ಪ್ರತಾಪಗೌಡ ಪಾಟೀಲರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಪಟ್ಟಣದ ರಾಜಕೀಯದಲ್ಲೂ ಬದಲಾವಣೆ ಗಾಳಿ ಬೀಸಿದೆ.
ಕಾಂಗ್ರೆಸ್ ಬೆಂಬಲಿತರಾಗಿದ್ದ ಪಪಂ ಸದಸ್ಯರು ಮಾಜಿ ಶಾಸಕರ ಹಿಂಬಾಲಕರೇ ಆಗಿದ್ದಾರೆ. ಹೀಗಾಗಿ ಇಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷ ಎಂಬ ಪ್ರಶ್ನೆ ಉದ್ಭವಿಸದಿದ್ದರೂ ಅವರಿವರ ಬೆಂಬಲಿಗರು ಎಂಬ ಸಮಸ್ಯೆ ಎದುರಾಗಬಹುದಾಗಿದೆ.
ಆಕಾಂಕ್ಷಿಗಳು: ಪಪಂ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎಗೆ ಮೀಸಲಾಗಿದೆ. ಈ ವರ್ಗದಲ್ಲಿ ಇಬ್ಬರು ಪುರುಷರು, ನಾಲ್ವರು ಮಹಿಳಾ ಸದಸ್ಯರು ಸೇರಿ 6 ಜನ ಸದಸ್ಯರಿದ್ದಾರೆ. ಮುದುಕಪ್ಪ ಹಳ್ಳಿಗೌಡ್ರು, ಮಂಜುನಾಥ ಕರಡಕಲ್, ರೇಣುಕಮ್ಮ ಲಿಂಗಪ್ಪ ಪೂಜಾರ, ನೂರಜಹಾನ್‌ಬೇಗಂ ಇಸ್ಮಾಯಿಲ್ ಸಾಬ್, ನಾಗಲಕ್ಷ್ಮೀ ಸುಬ್ಬರಾವ್, ಸತ್ಯವತಿ ಸೂರ್ಯಚಂದ್ರರಾವ್ ಇದ್ದಾರೆ. ಈಗಾಗಲೇ ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ಗೊಂದಲದಿಂದಾಗಿ ಒಂದು ವರ್ಷ ವ್ಯರ್ಥವಾಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿಗೆ ಒಳಪಡುವ ಸದಸ್ಯರಲ್ಲಿ ಕೆಲವರು ಅಧಿಕಾರ ಪಡೆಯುವ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಕೆಲವರು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾಗಲಿ ನೋಡೋಣ ಎನ್ನುತ್ತಿದ್ದಾರೆ.
ಈ ಮಧ್ಯೆ ಕೆಲ ಆಕಾಂಕ್ಷಿಗಳು ಮಾತ್ರ ಪಕ್ಷದ ಹಿರಿಯ ಮುಖಂಡರ ಜತೆ ಚರ್ಚೆ, ಸದಸ್ಯರೊಂದಿಗೆ ಗುಪ್ತ ಸಭೆ, ಮುಖಂಡರ ಭೇಟಿ ಮಾಡುತ್ತಿದ್ದಾರೆ. ಚುನಾವಣೆ ಪ್ರಕ್ರಿಯೆಗೆ ದಿನಾಂಕ ನಿಗದಿಯಾದ ನಂತರ ಏನಾಗಬಹುದು ಎಂಬ ಕುತೂಹಲ ಮೂಡಿದೆ.