ಬೆಂಗಳೂರು : ರಾಷ್ಟ್ರೀಯ ಸಹಕಾರ ಹೈನು ಮಹಾಮಂಡಳ ನಿಯಮಿತ(ಎನ್‌ಸಿಡಿಎಫ್‌ಐ) ಆನಂದ್ (ಗುಜರಾತ್ ರಾಜ್ಯ) ಇದರ ಆಡಳಿತ ಮಂಡಳಿಯ ನಿರ್ದೇಶಕರಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಇಂದು ಗುರುವಾರದಂದು ಗುಜರಾತ್ ರಾಜ್ಯದ ಆನಂದ್ ನಗರದಲ್ಲಿ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಗುಜರಾತ್ ಸಹಕಾರ ಹಾಲು ಮಾರಾಟ ಮಹಾಮಂಡಳದಿoದ ಶಾಮಲ್ ಬಾಯ್ ಪಟೇಲ್, ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳದಿoದ ವೆಂಕಟರಾವ್ ನಾಡಗೌಡ, ಹರಿಯಾಣ ಸಹಕಾರ ಹೈನು ಅಭಿವೃದ್ಧಿ ಮಹಾಮಂಡಳದಿoದ ರಣಧೀರಸಿಂಗ್ ಮತ್ತು ಕೇರಳ ರಾಜ್ಯ ಸಹಕಾರ ಹಾಲು ಮಾರಾಟ ಮಹಾಮಂಡಳದಿoದ ಕೆ.ಎಸ್. ಮಣಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಜ್ಜಲ್ ಬಿಸ್ವಾಸ್ ಅವರು ಪ್ರಕಟಿಸಿದ್ದಾರೆ.
ಕರ್ನಾಟಕದಿಂದ ರಾಷ್ಟ್ರೀಯ ಸಹಕಾರ ಡೈರಿ ಅಭಿವೃದ್ಧಿ ಮಹಾಮಂಡಳಿಯ ಆಡಳಿತ ಮಂಡಳಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಎನ್‌ಸಿಡಿಎಫ್‌ಐ ಅಧ್ಯಕ್ಷ ಮಂಗಲ್‌ಜೀತ್ ರಾಯ್ ಹಾಗೂ ಎನ್‌ಡಿಡಿಬಿ ಅಧ್ಯಕ್ಷ ಮನೀಷ್ ಶಾ ಅವರು ಅಭಿನಂದಿಸಿದ್ದಾರೆ.
ಎನ್‌ಸಿಡಿಎಫ್‌ಐ ದೇಶದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ದೇಶದ ಎಲ್ಲ ಸಹಕಾರ ಒಕ್ಕೂಟಗಳು, ಮಹಾಮಂಡಳಗಳು, ಭಾರತ ಸರ್ಕಾರದ ರಕ್ಷಣಾ ಇಲಾಖೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲು ಅನುಕೂಲವಾಗುವಂತೆ ಸಮನ್ವಯ ಕೆಲಸಗಳನ್ನು ನಿರ್ವಹಿಸುತ್ತಿದೆ. ಇತ್ತೀಚೆಗೆ 2016 ರಿಂದ ದೇಶದ ಎಲ್ಲ ಸಹಕಾರ ಒಕ್ಕೂಟಗಳು, ಮಹಾಮಂಡಳಗಳು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಆನ್‌ಲೈನ್ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಿದ್ದು, ಉತ್ತಮ ದರಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಡುತ್ತಿದೆ.
ಎನ್‌ಸಿಡಿಎಫ್‌ಐ ಬಾಂಬೆ ಕೋ-ಆಫ್ ಸೋಸೈಟಿ 1970 ರಲ್ಲಿ ನೋಂದಾಯಿತವಾದ ಒಂದುರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಯಾಗಿದೆ.