ಗೋಕಾಕ: ನೆರೆಪೀಡಿತ ಗ್ರಾಮಗಳಿಗೆ ಅಧಿಕಾರಿಗಳು ವಾರದೊಳಗಾಗಿ ಖುದ್ದಾಗಿ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ತಾಪಂ ಸಭಾಗೃಹದಲ್ಲಿ ನಡೆದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ವ್ಯಾಪ್ತಿಯ ಪ್ರವಾಹದ ಕುರಿತು ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಕೆಲವು ಕುಟುಂಬಗಳು ಇನ್ನೂ ಶಾಲೆ, ದೇವಸ್ಥಾನಗಳಲ್ಲಿ ವಾಸಿಸುತ್ತಿದ್ದು ಅಂತಹವರಿಗೆ ಕೂಡಲೇ ಶೆಡ್‌ಗಳನ್ನು ನಿರ್ಮಿಸಿಕೊಡಬೇಕು. ನೈಜ ಸಂತ್ರಸ್ತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಸಂಪೂರ್ಣ ಬಿದ್ದ ಮನೆಗಳು ಸಿ ವರ್ಗದಲ್ಲಿ ಬಂದಿದ್ದು, ಅವುಗಳನ್ನು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ಎ ಅಥವಾ ಬಿ ವರ್ಗದಲ್ಲಿ ತೆಗೆದುಕೊಳ್ಳಬೇಕು. ಮನೆ ಬೀಳಲಾರದವು ಎ ಮತ್ತು ಬಿ ವರ್ಗದಲ್ಲಿ ಬಂದಿದ್ದು, ಅವುಗಳನ್ನು ಪರಿಶೀಲನೆ ಮಾಡಿ ಅರ್ಹ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಅಡಿಬಟ್ಟಿ ಗ್ರಾಮವು ಸ್ಥಳಾಂತರಗೊಂಡಿದ್ದು, ನಿವೇಶನ ಸಂಬಂಧ 21.17 ಎಕರೆ ಜಮೀನನ್ನು ಕೂಡಲೇ ಸರ್ವೇ ಮಾಡಿ ಹಕ್ಕುಪತ್ರಗಳು ಇದ್ದ ಕುಟುಂಬಗಳಿಗೆ ಜಾಗೆಯನ್ನು ಹಂಚಿಕೆ ಮಾಡಬೇಕು. ಹಕ್ಕು ಪತ್ರ ಹೊಂದದ ಹೊಸ ಕುಟುಂಬಗಳಿಗೆ ನಿವೇಶನ ಕಲ್ಪಿಸಿಕೊಡಬೇಕು. ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಹ ಹಾಗೂ ನಿರಂತರ ಮಳೆಯಿಂದ ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು ಹಾಗೂ ಇತರೇ ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದು, ಕೂಡಲೇ ಸರ್ಕಾರಕ್ಕೆ ಮತ್ತೂಂದು ಅಂದಾಜು ಸರ್ವೇ ವಿವರ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಸಂತ್ರಸ್ತರ ಕೆಲವೊಂದು ಕುಟುಂಬಗಳಿಗೆ ಕೆಲವೊಂದು ದಾಖಲಾತಿಗಳ ಸಮಸ್ಯೆ ಉಂಟಾಗಿದೆ. ಆಧಾರಕಾರ್ಡ್, ರೇಷನ್
ಕಾರ್ಡ್, ಬ್ಯಾಂಕ್ ಅಕೌಂಟಗಳನ್ನು ಸಂತ್ರಸ್ತರ ಕುಟುಂಬಗಳಿಗೆ ಮಾಡಿಕೊಡುವಂತೆ ಸಭೆಯಲ್ಲಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಅ ಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು. ಎಡಿಸಿ. ಪ್ರಭುಲಿಂಗ ಕವಳಿಕಟ್ಟಿ, ಬೈಲಹೊಂಗಲ ಎಸಿ ಶಿವಾನಂದ ಭಜಂತ್ರಿ, ಗೋಕಾಕ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ್ ಡಿ.ಜೆ. ಮಹಾತ, ತಾ.ಪಂ. ಇಒ ಬಸವರಾಜ ಹೆಗ್ಗನಾಯಕ ಉಪಸ್ಥಿತರಿದ್ದರು.